ಕ್ಯಾಲಿಫೋರ್ನಿಯಾ(ಅಮೆರಿಕ): ರಷ್ಯಾದ ಮೇಲೆ ವಿವಿಧ ರಾಷ್ಟ್ರಗಳು ವಿಧಿಸುತ್ತಿರುವ ಆರ್ಥಿಕ, ರಾಜತಾಂತ್ರಿಕ ಹಾಗು ಸಾಂಸ್ಕೃತಿಕ ನಿರ್ಬಂಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈಗ ಅಮೆರಿಕದ ಪಾವತಿ ಮತ್ತು ಕ್ರೆಡಿಟ್ ಕಾರ್ಡ್ ಸೇವಾ ಕಂಪನಿಗಳಾದ ಮಾಸ್ಟರ್‌ಕಾರ್ಡ್ ಮತ್ತು ವೀಸಾ ಕಂಪನಿಗಳು ರಷ್ಯಾದಲ್ಲಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.
ರಷ್ಯಾದ ಬ್ಯಾಂಕ್ಗಳಿಂದ ವಿತರಣೆ ಮಾಡಲ್ಪಟ್ಟ ಎಲ್ಲಾ ಮಾಸ್ಟರ್ ಕಾರ್ಡ್ ಮತ್ತು ವೀಸಾ ಕಾರ್ಡ್ಗಳು ದೇಶದ ಹೊರಗೆ ಬಳಸಲು ಸಾಧ್ಯವಾಗದಂತೆ ನಿರ್ಬಂಧ ಹೇರಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವೀಸಾ, 'ರಷ್ಯಾದೊಳಗಿನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ತನ್ನ ಪಾಲುದಾರರೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಹಿವಾಟಿಗೆ ನಿರ್ಬಂಧ ಹೇರಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಷ್ಯಾದ ಹಣಕಾಸು ಸಂಸ್ಥೆಗಳಿಂದ ವಿತರಣೆ ಮಾಡಲ್ಪಟ್ಟ ವೀಸಾ ಕಾರ್ಡ್ಗಳು ದೇಶದ ಹೊರಗೆ ಸೇವೆಯನ್ನು ಒದಗಿಸುವುದಿಲ್ಲ. ಇದರ ಜೊತೆಗೆ ರಷ್ಯಾದ ಹೊರಗೆ ವಿತರಣೆ ಮಾಡಲಾದ ವೀಸಾ ಕಾರ್ಡ್ಗಳು ರಷ್ಯಾದೊಳಗೆ ಕಾರ್ಯ ನಿರ್ವಹಣೆ ಮಾಡುವುದಿಲ್ಲ' ಎಂದಿದೆ.
ಉಕ್ರೇನ್ ಮತ್ತು ರಷ್ಯಾದ ಯುದ್ಧ ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆಯಾಗಿದ್ದು, ಮೌಲ್ಯಗಳಿಗೆ ಅನುಗುಣವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವೀಸಾ ಇಂಕ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲ್ ಕೆಲ್ಲಿ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.