ಲಂಡನ್: 1919ರಲ್ಲಿ ಪಂಜಾಬ್‌ನ ಅಮೃತಸರದಲ್ಲಿ ನಡೆದ ಅಮಾನವೀಯ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಬ್ರಿಟನ್ ರಾಣಿ ಎಲಿಜಬೆತ್ (95) ಅವರನ್ನು ಹತ್ಯೆ ಮಾಡಲು ಯತ್ನಿಸಿದ ಯುವಕನನ್ನು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ತಾನು ಭಾರತೀಯ ಸಿಖ್ ಮತ್ತು ತನ್ನ ಹೆಸರು ಜಸ್ವಂತ್ ಸಿಂಗ್ ಚೊಯಿಲ್ ಎಂದು ಆತ ಹೇಳಿಕೊಂಡಿದ್ದಾನೆ.
1. ಯುವಕನ ಮೇಲೆ ಮನೋ ವೈದ್ಯರ ನಿಗಾ
ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ರಾಣಿಯನ್ನು ಹತ್ಯೆ ಮಾಡಲು ಮುಂದಾಗಿದ್ದಾಗಿ ಆರೋಪಿ ಸ್ನ್ಯಾಪ್‌ಚಾಟ್‌ನಲ್ಲಿ ವಿಡಿಯೋ ಮೂಲಕ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಆರೋಪಿ ಸಂಪೂರ್ಣವಾಗಿ ಮುಖವಾಡ ಧರಿಸಿದ್ದಾನೆ. ಆತನ ಮಾನಸಿಕ ಪರಿಸ್ಥಿತಿಯ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಪ್ರಸ್ತುತ ಜ್ವಸಂತ್ ಸಿಂಗ್ ಚೊಯಿಲ್ ಮೇಲೆ ಮನೋವೈದ್ಯರು ನಿಗಾ ವಹಿಸಿದ್ದಾರೆ.
2. ವಿಂಡ್ಸರ್ ಕ್ಯಾಸಲ್‌ನಲ್ಲಿ ನಡೆದ ಘಟನೆ
ಕ್ರಿಸ್ಮಸ್ ಆಚರಿಸಲು ರಾಣಿ ಎಲಿಜಬೆತ್ ವಿಂಡ್ಸರ್ ಕ್ಯಾಸಲ್‌ಗೆ ಆಗಮಿಸಿದ್ದರು. ಆಗ ಸ್ಥಳಕ್ಕೆ ಹೋಗಿದ್ದ ಆರೋಪಿ ತನ್ನ ಕೈಯಲ್ಲಿ ಬಿಲ್ಲಿನಂತಹ ಆಯುಧವನ್ನು ಹಿಡಿದುಕೊಂಡಿದ್ದ. ರಾಣಿಯ ನಿವಾಸಕ್ಕೆ ತೆರಳಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದು, ಆತನ ಬಳಿ ಇದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.
3. ಯುವಕ ವಿಡಿಯೋದಲ್ಲಿ ಹೇಳಿದ್ದೇನು?
ರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ. ಇದು 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರ. ಈ ವೀಡಿಯೋ ನಿಮಗೆ ಬಂದಿದ್ದರೆ ನನ್ನ ಸಾವು ಖಚಿತ. ಸಾಧ್ಯವಾದರೆ ಶೇರ್ ಮಾಡಿ. ಆಸಕ್ತಿ ಇದ್ದರೆ ಸುದ್ದಿಯನ್ನು ಪ್ರಸಾರ ಮಾಡಿ ಎಂದು ಆತ ವಿಡಿಯೋದಲ್ಲಿ ಹೇಳಿದ್ದ. ಸೌತಾಂಪ್ಟನ್ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ಯುವಕ ವಾಸಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣದ ಪೊಲೀಸ್ ತನಿಖೆ ನಡೆಯುತ್ತಿದೆ.
ಇದನ್ನು ಓದಿ:Texas Firing: ಅಮೆರಿಕದಲ್ಲಿ ದುಷ್ಕರ್ಮಿಯಿಂದ ಗುಂಡಿನ ದಾಳಿ, ಮೂವರು ಸಾವು