ರಷ್ಯಾ- ಉಕ್ರೇನ್ ಯುದ್ಧ: ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.. - ರಷ್ಯಾ ಉಕ್ರೇನ್ ಸುದ್ದಿ
ರಷ್ಯಾವು ಉಕ್ರೇನ್ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಿದ್ದು, ಒಂಬತ್ತನೇ ದಿನದ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ ನೋಡಿ.
ರಷ್ಯಾ- ಉಕ್ರೇನ್
ರಷ್ಯಾ-ಉಕ್ರೇನ್ ಮಧ್ಯೆ ಭೀಕರ ಸಂಘರ್ಷ ನಡೆಯುತ್ತಿದೆ. ಈಗಾಗಲೇ ಸಾವಿರಾರು ಯೋಧರು, ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಇದರ ಜೊತೆಗೆ ಸಾವಿರಾರು ಜನ ಗಾಯಗೊಂಡಿದ್ದಾರೆ. ರಷ್ಯಾದ ಉಕ್ರೇನ್ ಆಕ್ರಮಣದ ಒಂಬತ್ತನೇ ದಿನದ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ ನೋಡಿ.
- ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳನ್ನು ರಷ್ಯಾದಲ್ಲಿ ನಿರ್ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಸ್ಕೋ ಹೇಳಿದೆ.
- ರಾಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಸಶಸ್ತ್ರ ಪಡೆಗಳ ಬಗ್ಗೆ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕ್ರಮಕೈಗೊಂಡಿದ್ದು, 15 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಮಸೂದೆಗೆ ಸಹಿ ಹಾಕಿದ್ದಾರೆ.
- ರಷ್ಯಾ ಸೇನೆ ಕಂಡು ಕೇಳರಿಯದ ರೀತಿಯಲ್ಲಿ ಉಕ್ರೇನ್ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸ್ತಿದೆ. ಈ ಹಿನ್ನೆಲೆ ಖಾರ್ಕೀವ್, ಚೆರ್ನಿಹೀವ್, ಸುಮಿ, ಕೀವ್ ನಗರಗಳು ತತ್ತರಿಸಿದ್ದು, ಸ್ಮಶಾನದಂತಾಗಿ ಬಿಟ್ಟಿವೆ. ಉಕ್ರೇನ್‌ನ ಉತ್ತರ, ಪೂರ್ವ ಮತ್ತು ದಕ್ಷಿಣದಲ್ಲಿ ಭಾರಿ ಹೋರಾಟ ಮುಂದುವರೆದಿದೆ.
- ಕೀವ್ ಜೂನಲ್ಲಿನ ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಷ್ಟೇ ಅಲ್ಲದೆ, ಸಾವಿರಾರು ಉಕ್ರೇನಿಯನ್ ನಿರಾಶ್ರಿತರು ಯುದ್ಧಪೀಡಿತ ದೇಶದಿಂದ ವಲಸೆ ಮುಂದುವರೆಸಿದ್ದಾರೆ.
- ಉಕ್ರೇನ್‌ನ ಪ್ರಮುಖ ಪರಮಾಣು ಸ್ಥಾವರದಲ್ಲಿ ಗುರುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಯೂಕ್ರೇನ್ನಲ್ಲಿರುವ ಯುರೋಪ್ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರ ಝಪೊರಿಝಿಯಾ ಮೇಲೆ ರಷ್ಯಾ ಶೆಲ್ ದಾಳಿ ನಡೆಸಲಾಗಿದೆ ಎಂದು ಯುಎಸ್ ಆರೋಪಿಸಿದೆ.
- ಉಕ್ರೇನ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸಿದ್ದಾರೆ.
- ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಷ್ಯಾಕ್ಕೆ ಉಕ್ರೇನ್ ಮೇಲೆ ಮಾಡುತ್ತಿರುವ ಆಕ್ರಮಣವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ ಎಂದು ಶ್ವೇತಭವನವು ಹೇಳಿಕೆಯಲ್ಲಿ ತಿಳಿಸಿದೆ.