ಕರ್ನಾಟಕ

karnataka

ETV Bharat / international

'ಜೂಲಿಯನ್ ಅಸ್ಸಾಂಜೆ ಜೈಲಿನಲ್ಲೇ ಸಾಯಬಹುದು'..! 60ಕ್ಕೂ ಅಧಿಕ ವೈದ್ಯರಿಂದ ಬಹಿರಂಗ ಪತ್ರ - ಜೂಲಿಯನ್ ಅಸ್ಸಾಂಜೆ ಬಗ್ಗೆ ವೈದ್ಯರ ಆತಂಕ

ಜೂಲಿಯನ್ ಅಸ್ಸಾಂಜೆ ಪ್ರಸ್ತುತ ಬ್ರಿಟನ್​ನ ಬಿಗಿ ಭದ್ರತೆ ಹೊಂದಿರುವ ಜೈಲಿನಲ್ಲಿದ್ದು, ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ, ಹೀಗಾಗಿ ತಕ್ಷಣವೇ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ವೈದ್ಯರು ಹೇಳಿದ್ದಾರೆ.

ಜೂಲಿಯನ್ ಅಸ್ಸಾಂಜೆ

By

Published : Nov 25, 2019, 10:40 AM IST

ಲಂಡನ್​​: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಜೈಲಿನಲ್ಲೇ ಸಾವನ್ನಪ್ಪಬಹುದು ಎಂದು ಆತಂಕ ವ್ಯಕ್ತಪಡಿಸಿರುವ 60ಕ್ಕೂ ಅಧಿಕ ವೈದ್ಯರು ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್​ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಅಸ್ಸಾಂಜೆ ಪ್ರಸ್ತುತ ಬ್ರಿಟನ್​ನ ಬಿಗಿ ಭದ್ರತೆ ಹೊಂದಿರುವ ಜೈಲಿನಲ್ಲಿದ್ದು, ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ, ಹೀಗಾಗಿ ತಕ್ಷಣವೇ ಸೂಕ್ತ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ವೈದ್ಯರು ಹೇಳಿದ್ದಾರೆ.

ದಕ್ಷಿಣ ಲಂಡನ್‌ನ ಬೆಲ್‌ಮಾರ್ಶ್‌ ಜೈಲಿನಲ್ಲಿರುವ ಅಸ್ಸಾಂಜೆಯನ್ನು ತಕ್ಷಣವೇ ಯುನಿವರ್ಸಿಟಿ ಟೀಚಿಂಗ್‌ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕು ಎಂದು ವೈದ್ಯರು ತಮ್ಮ ಪತ್ರದಲ್ಲಿ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್​​ ಅವರಿಗೆ ಒತ್ತಾಯಿಸಿದ್ದಾರೆ.

ಅಸ್ಸಾಂಜೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ನುರಿತ ವೈದ್ಯರ ತಪಾಸಣೆ ಅಗತ್ಯವಿದೆ. ತಕ್ಷಣವೇ ವೈದ್ಯಕೀಯ ಸೌಲಭ್ಯ ನೀಡಲು ಅಸಾಧ್ಯವಾದಲ್ಲಿ ಅಸ್ಸಾಂಜೆ ಜೈಲಿನಲ್ಲೇ ಯಾವುದೇ ಕ್ಷಣದಲ್ಲೂ ಸಾವನ್ನಪ್ಪಬಹುದು ಎಂದು ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಸ್ವೀಡನ್, ಇಟಲಿ, ಜರ್ಮನಿ, ಶ್ರೀಲಂಕಾ ಹಾಗೂ ಪೋಲಂಡ್ ಮೂಲದ ವೈದ್ಯರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ತಿಂಗಳು ಕೋರ್ಟ್​ ವಿಚಾರಣೆಗೆ ಹಾಜರಾಗುವ ವೇಳೆಗಾಗಲೇ ಅಸ್ಸಾಂಜೆ, ಮಾನಸಿಕ ಹಾಗೂ ದೈಹಿಕವಾಗಿದೆ ಅತ್ಯಂತ ದುರ್ಬಲರಾಗಿದ್ದರು. ತನ್ನ ಜನ್ಮ ದಿನಾಂಕವನ್ನೇ ಅಸ್ಸಾಂಜೆ ನೆನಪಿಸಿಕೊಳ್ಳುವಲ್ಲಿ ಕೊಂಚ ತಡಬಡಿಸಿದ್ದರು. ತನಗೆ ಇಲ್ಲಿ ನಡೆದ ವಿಚಾರಣೆ ಯಾವುದೂ ಸಹ ಸರಿಯಾಗಿ ತಿಳಿಯಲಿಲ್ಲ ಎಂದು ಕೋರ್ಟ್​ ವಿಚಾರಣೆ ಬಳಿಕ ಜಿಲ್ಲಾ ನ್ಯಾಯಾಧೀಶರ ಮುಂದೆ ಹೇಳಿದ್ದರು. ಜೊತೆಗೆ ಜೈಲಿನಲ್ಲಿ ತನ್ನನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ದೂರು ಹೇಳಿಕೊಂಡಿದ್ದರು.

48 ವರ್ಷ ವಯಸ್ಸಿನ ಆಸ್ಟ್ರೇಲಿಯಾ ಮೂಲದ ಜೂಲಿಯನ್ ಅಸ್ಸಾಂಜೆ, ಅಫ್ಘಾನಿಸ್ತಾನ ಮತ್ತು ಇರಾಕ್‌ ಮೇಲೆ 2010ರಲ್ಲಿ ಅಮೆರಿಕ ನಡೆಸಿದ ಬಾಂಬ್‌ ದಾಳಿಗೆ ಬಗ್ಗೆ ಸೇನೆಯ ಕೆಲವು ಅತಿ ರಹಸ್ಯ ಮಾಹಿತಿಗಳನ್ನು ತಮ್ಮ ವಿಕಿಲೀಕ್ಸ್‌ ಮೂಲಕ ಬಹಿರಂಗಪಡಿಸಿದ್ದರು. ಇದೇ ಹಿನ್ನೆಲೆಯಲ್ಲಿ ಅಸ್ಸಾಂಜೆಯನ್ನು ತಮ್ಮ ದೇಶಕ್ಕೆ ಗಡಿಪಾರು ಮಾಡುವಂತೆ ಅಮೆರಿಕ ಮನವಿ ಮಾಡುತ್ತಲೇ ಬಂದಿದೆ. ಅಸ್ಸಾಂಜೆ ವಿರುದ್ಧ ಅಮೆರಿಕ ಬೇಹುಗಾರಿಕಾ ನಿಷೇಧ ಕಾಯ್ದೆ ಪ್ರಯೋಗಿಸಿದೆ. ಈ ಕಾಯ್ದೆ ಪ್ರಕಾರ ಅಸ್ಸಾಂಜೆಗೆ 175 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗುತ್ತದೆ.

ABOUT THE AUTHOR

...view details