ಜೆರುಸಲೆಮ್ (ಇಸ್ರೇಲ್):ಇಸ್ರೇಲ್ ಪಡೆಗಳು ಗಾಜಾದಲ್ಲಿ ನಡೆಸಿದ ಏರ್ಸ್ಟ್ರೈಕ್ನಲ್ಲಿ ಪ್ಯಾಲೆಸ್ತೀನ್‌ನ ಇಸ್ಲಾಮಿಕ್ ಜಿಹಾದಿ ಸಂಘಟನೆಯ ಪ್ರಮುಖ ಕಮಾಂಡರ್ ಹತ್ಯೆಯಾಗಿದ್ದಾನೆ. ಈ ಘಟನೆಯ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಗಾಜಾ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಈತನೊಂದಿಗೆ ಇತರ 10 ಮಂದಿ ಉಗ್ರರನ್ನೂ ಹತ್ಯೆ ಮಾಡಲಾಗಿದೆ ಎಂದು ಪ್ಯಾಲೆಸ್ತೀನ್ ಸರ್ಕಾರ ಮಾಹಿತಿ ನೀಡಿದೆ. ಇನ್ನೊಂದೆಡೆ ಇಸ್ರೇಲ್ ನಡೆಸಿದ ಏರ್ಸ್ಟ್ರೈಕ್ನಲ್ಲಿ ಇಸ್ಲಾಮಿಕ್ ಜಿಹಾದಿ ನಾಯಕ ಅಕ್ರಮ್-ಅಲ್-ಅಜೌರಿ ಮಗ ಸೇರಿದಂತೆ ಕನಿಷ್ಟ ಇಬ್ಬರು ಹತರಾಗಿದ್ದಾರೆ ಎಂದು ಸಿರಿಯಾ ಹೇಳಿದೆ.
ಈ ಬೆಳವಣಿಗೆ ಇಸ್ರೇಲ್ ಮತ್ತು ಗಾಜಾ ಉಗ್ರರ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟುಮಾಡಿದೆ. ಗಾಜಾ ನಗರದ ಶಜೈಯಾದಲ್ಲಿರುವ ಮನೆಗಳ ಮೇಲೆ ರಾತ್ರೋ ರಾತ್ರಿ ನಡೆಸಿದ ಏರ್ಸ್ಟ್ರೈಕ್ನಲ್ಲಿ ಬಹ ಅಬು ಅಲ್-ಅಟಾ ಹತ್ಯೆಯಾಗಿದ್ದಾನೆ. ಆತನ ಪತ್ನಿ ಅಸ್ಮಾ ಅಬು ಅಲ್-ಅಟಾ ಮತ್ತು ಇಸ್ಲಾಮಿಕ್ ಜಿಹಾದ್ನ ಸಶಸ್ತ್ರ ವಿಭಾಗದ ಇತರ ನಾಲ್ವರು ಉಗ್ರರೂ ಕೂಡಾ ಕೊಲ್ಲಲ್ಪಟ್ಟಿದ್ದಾರೆ. ಇನ್ನು ಇಸ್ರೇಲ್ ದಾಳಿಯಿಂದಾಗಿ ಸುಮಾರು 45 ಜನ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಈ ಬಗ್ಗೆ ಸಮರ್ಥನೆ ನೀಡಿರುವ ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್), ಇಸ್ರೇಲ್ ನಾಗರಿಕರು ಹಾಗೂ ಸೈನಿಕರ ಮೇಲೆ ಅಬು ಅಲ್-ಅಟಾ ಉಗ್ರ ದಾಳಿ ನಡೆಸಲು ಯತ್ನಿಸುತ್ತಿದ್ದ ಎಂದು ಹೇಳಿದೆ.
ಇನ್ನೊಂದೆಡೆ ದಾಳಿಗೆ ಪ್ರತೀಕಾರ ತೀರಿಸಲು ಮುಂದಾಗಿರುವ ಪ್ಯಾಲೇಸ್ತೀನ್, ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ್ದು ಹಲವರು ಗಾಯಗೊಂಡಿದ್ದು, ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಈ ಬಗ್ಗೆ ಇಸ್ರೇಲ್ ಫೋಟೋ ಸಮೇತ ಟ್ವೀಟ್ ಮಾಡಿ ಮಾಹಿತಿ ಒದಗಿಸಿದೆ.