ಲಂಡನ್:ಉಪಚುನಾವಣೆಯಲ್ಲಿ ಗೆದ್ದು, ಲಂಡನ್ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿ ಭಾರತೀಯ ಮೂಲದ ಅನ್ವೀ ಭೂತಾನಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ರಶ್ಮಿ ಸಮಂತ್ ಅವರು ಕಳೆದ ಫೆಬ್ರವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕೆಲ ಪೋಸ್ಟ್ಗಳ ವಿವಾದದಿಂದಾಗಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಹೀಗಾಗಿ ಉಪಚುನಾವಣೆ ನಡೆಸಲಾಗಿತ್ತು.
ಅನ್ವೀ ಭೂತಾನಿ ಅವರು ಆಕ್ಸ್‌ಫರ್ಡ್ ವಿವಿಯ ಬರುವ ಮ್ಯಾಗ್ಡಲೀನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಯೂನಿವರ್ಸಿಟಿಯ ಜಾಗೃತಿ ಮತ್ತು ಸಮಾನತೆಯ ಅಭಿಯಾನವನ್ನು ಮುನ್ನಡೆಸಿದ್ದರು ಹಾಗೂ ಆಕ್ಸ್‌ಫರ್ಡ್ ಇಂಡಿಯಾ ಸೊಸೈಟಿಯ ಅಧ್ಯಕ್ಷೆಯಾಗಿದ್ದಾರೆ.
11 ವಿದ್ಯಾರ್ಥಿಗಳು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದು, ದಾಖಲೆಯ ಮತಗಳನ್ನು ಪಡೆದು ಅನ್ವೀ ಭೂತಾನಿ ಜಯಭೇರಿ ಬಾರಿಸಿದ್ದಾರೆ. ನಿನ್ನೆ ರಾತ್ರಿ ವಿಶ್ವವಿದ್ಯಾಲಯವು ಅವರನ್ನು ವಿಜೇತರೆಂದು ಘೋಷಿಸಿದೆ.
ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿಗಾಗಿ ಅಭಿಯಾನ, ಪಠ್ಯಕ್ರಮವನ್ನು ವೈವಿಧ್ಯಗೊಳಿಸುವುದು, ಶಿಸ್ತಿನ ಕ್ರಮಗಳು, ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕ್ರಮಗಳು - ಇವು ಅನ್ವೀ ಭೂತಾನಿ ಅವರ ಚುನಾವಣಾ ಪ್ರಣಾಳಿಕೆಯಾಗಿತ್ತು ಎಂದು 'ಚೆರ್ವೆಲ್' ಎಂಬ ವಿದ್ಯಾರ್ಥಿ ಪತ್ರಿಕೆ ವರದಿ ಮಾಡಿದೆ.