ಜಿನೇವಾ(ಸ್ವಿಟ್ಜರ್ಲ್ಯಾಂಡ್):ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದಿದ್ದ ಪಾಕಿಸ್ತಾನಕ್ಕೆ ಇದೇ ವಿಷಯವನ್ನು ಮಂಡಿಸಲು ಮತ್ತೊಂದು ಅವಕಾಶ ದೊರೆತಿದ್ದು, ಭಾರತ ಸಹ ಇದೇ ವೇಳೆ ತನ್ನ ತಿರುಗೇಟು ನೀಡಲು ಸಿದ್ಧವಾಗಿದೆ.
ವಿಶ್ವಸಂಸ್ಥೆಯ 42ನೇ ಮಾನವ ಹಕ್ಕುಗಳ ಮಂಡಳಿ ಸಭೆ ಇಂದು ಜಿನೇವಾದಲ್ಲಿ ಆಯೋಜನೆಯಾಗಿದ್ದು ಈ ಸಭೆಯಲ್ಲಿ ಪಾಕಿಸ್ತಾನ, ಕಾಶ್ಮೀರ ವಿಚಾರವನ್ನೇ ಪ್ರಮುಖ ಅಜೆಂಡಾವನ್ನಾಗಿಸಿದೆ.
ಮಾನವ ಹಕ್ಕುಗಳ ಸಭೆಯಲ್ಲಿ ಭಾರತ ಸಹ ಪಾಲ್ಗೊಳ್ಳುತ್ತಿದ್ದು ಈ ಮೂಲಕ ಇಂದಿನ ಸಭೆ ಸಾಕಷ್ಟು ಮಹತ್ವ ಪಡೆದಿದೆ. ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಸೋಮವಾರ ಮೂರು ದಿನಗಳ ಜಿನೇವಾ ಪ್ರವಾಸ ಕೈಗೊಂಡಿದ್ದು, ಇಂದಿನ ಸಭೆಯಲ್ಲಿ ಪಾಕಿಸ್ತಾನದ ನಿಲುವು ಮಂಡನೆಗೆ ಖುರೇಷಿ ಮುಂದಾಳತ್ವ ವಹಿಸುವ ಸಾಧ್ಯತೆ ಇದೆ. ಜಿನೇವಾಗೆ ತೆರಳುವ ಮುನ್ನ ಟ್ವೀಟ್ ಮಾಡಿದ್ದ ಖುರೇಷಿ ಮಾನವ ಹಕ್ಕುಗಳ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಖಂಡಿತವಾಗಿಯೂ ಪ್ರಸ್ತಾಪಿಸಲಾಗುವುದು ಎಂದಿದ್ದರು.
ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿ ಈಗಾಗಲೇ ಸಾಕಷ್ಟು ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಇಂದಿನ ಸಭೆಯಲ್ಲಿ ಯಾವ ರೀತಿ ತನ್ನ ಅಜೆಂಡಾವನ್ನು ಮುಂದಿಡಲಿದೆ ಎನ್ನುವ ಕುತೂಹಲ ಮೂಡಿದೆ. ಇತ್ತ ಭಾರತ ಸಹ ಪಾಕಿಸ್ತಾನವನ್ನು ಎಲ್ಲ ಹಂತದಲ್ಲೂ ಹಳಿಯಲು ಸಿದ್ಧವಾಗಿದೆ.