ಜಿನೀವಾ (ಸ್ವಿಟ್ಜರ್ಲ್ಯಾಂಡ್):ಪೌರತ್ವ (ತಿದ್ದುಪಡಿ) ಕಾಯ್ದೆ,ಕಾಶ್ಮೀರ ಹಾಗು ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಇಂಥ ವಿಷಯಗಳಲ್ಲಿ ಆತುರದ ತೀರ್ಮಾನಗಳಿಗೆ ಬರುವುದು ತರವಲ್ಲ. ನೀವು ಮೊದಲು ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರಿಗೆ ಸಂವಿಧಾನಾತ್ಮಕವಾಗಿ ಖಾತರಿಪಡಿಸಿರುವ ಮತ್ತು ರಕ್ಷಿಸಲಾದ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಉತ್ತಮ ತಿಳುವಳಿಕೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಕಳೆದ ಡಿಸೆಂಬರ್‌ನಲ್ಲಿ ಅಂಗೀಕರಿಸಲಾದ ಪೌರತ್ವ ಕಾಯ್ದೆ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಕಳವಳ ವ್ಯಕ್ತಪಡಿಸಿದ ನಂತರ ಭಾರತ ಈ ಹೇಳಿಕೆ ನೀಡಿದೆ.
ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ 43ನೇ ಅಧಿವೇಶನದಲ್ಲಿ ಮಿಚೆಲ್ ಬ್ಯಾಚೆಲೆಟ್ ಮಾತನಾಡಿ, ಭಾರತದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಅಂಗೀಕರಿಸಲ್ಪಟ್ಟ ಪೌರತ್ವ ತಿದ್ದುಪಡಿ ಕಾಯ್ದೆ ಆತಂಕಕಾರಿಯಾಗಿದೆ. ಎಲ್ಲಾ ಸಮುದಾಯದವರು ಶಾಂತಿಯುತವಾಗಿ ಈ ಕಾಯ್ದೆ ವಿರೋಧಿಸುತ್ತಿದ್ದು, ದೇಶದ ದೀರ್ಘ ಸಂಪ್ರದಾಯ ಮತ್ತು ಜಾತ್ಯತೀತತೆಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದಿದ್ದರು.
ಅವರು ಮುಂದುವರೆದು ಮಾತನಾಡಿ, ದೆಹಲಿಯಲ್ಲಿ ಭಾನುವಾರದಿಂದ ಉಂಟಾದ ಕೋಮು ಗಲಭೆಯಲ್ಲಿ ಇಲ್ಲಿಯವರೆಗೆ ಹಲವರು ಸಾವಿಗೀಡಾಗಿದ್ದಾರೆ. ಹಿಂಸಾಚಾರವನ್ನು ತಡೆಗಟ್ಟಲು ನಾನು ಎಲ್ಲಾ ರಾಜಕೀಯ ಮುಖಂಡರಿಗೆ ಮನವಿ ಮಾಡುತ್ತೇನೆ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಪ್ರತಿನಿಧಿ, ಇಂಥ ವಿಷಯಗಳಲ್ಲಿ ಆತುರದ ತೀರ್ಮಾನಗಳಿಗೆ ಬರುವುದು ತರವಲ್ಲ. ನೀವು ಮೊದಲು ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರಿಗೆ ಸಂವಿಧಾನಾತ್ಮಕವಾಗಿ ಖಾತರಿಪಡಿಸಿರುವ ಮತ್ತು ರಕ್ಷಿಸಲಾದ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ ಉತ್ತಮ ತಿಳುವಳಿಕೆ ಬೆಳೆಸಿಕೊಳ್ಳಬೇಕು ಎಂದು ನಯವಾಗಿಯೇ ಕಿವಿ ಹಿಂಡಿದೆ.
ಶಾಂತಿಯುತ ಪ್ರತಿಭಟನೆಗಳು ಮತ್ತು ಪ್ರದರ್ಶನಗಳು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳ ಭಾಗವಾಗಿದೆ. ಆದಾಗ್ಯೂ, ಭಾರತದ ಪ್ರಜಾಪ್ರಭುತ್ವ ನೀತಿಯಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ನಾವು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಿದ್ದೇವೆ' ಎಂದು ಭಾರತ ಸ್ಪಷ್ಟಪಡಿಸಿದೆ.
ಕಾಶ್ಮೀರದ ವಿಚಾರದಲ್ಲಿ 'ಗಂಭೀರ ಪ್ರಚೋದನೆಗಳು ಮತ್ತು ಭಯೋತ್ಪಾದಕ ಗುಂಪುಗಳಿಗೆ ಸಕ್ರಿಯ ಬೆಂಬಲ ನೀಡುವ ಮೂಲಕ ಒಂದು ದೇಶ (ಪರೋಕ್ಷವಾಗಿ ಪಾಕಿಸ್ತಾನ) ಹಳಿ ತಪ್ಪಿಸಲು ಮಾಡಿದ ಪ್ರಯತ್ನಗಳ ಹೊರತಾಗಿಯೂ ಜಮ್ಮು ಕಾಶ್ಮೀರದ ಪರಿಸ್ಥಿತಿ ಶೀಘ್ರವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಭದ್ರತಾ ಪಡೆಗಳು ಗರಿಷ್ಠ ಸಂಯಮ ಕಾಯ್ದುಕೊಂಡಿವೆ. ಇಲ್ಲಿಯವರೆಗೆ ಒಂದು ಜೀವಂತ ಗುಂಡನ್ನೂ ಹಾರಿಸಲಾಗಿಲ್ಲ ಮತ್ತು ಪೊಲೀಸ್ ಕ್ರಮದಲ್ಲಿ ಯಾವುದೇ ನಾಗರಿಕ ಜೀವ ಕಳೆದುಕೊಂಡಿಲ್ಲ ಎಂದು ಭಾರತ ಅಂತರಾಷ್ಟ್ರೀಯ ವೇದಿಕೆಯಲ್ಲಿ ತಿಳಿಸಿದೆ.