ಮಾಸ್ಕೋ (ರಷ್ಯಾ): ರಷ್ಯಾದ ಪೂರ್ವ ಭಾಗದಲ್ಲಿರುವ ಕಮ್ಚಟ್ಕಾ ಪ್ರದೇಶದಲ್ಲಿರುವ ಕುರಿಲ್ ಸರೋವರಕ್ಕೆ 16 ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಈ ಅಪಘಾತದಲ್ಲಿ ಎಂಟು ಜನರು ನಾಪತ್ತೆಯಾಗಿದ್ದು, ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ.
ಈ ಸಂಬಂಧ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ಪ್ರವಾಸಿಗರ ರಾಷ್ಟ್ರೀಯತೆ ಇನ್ನೂ ದೃಢಪಟ್ಟಿಲ್ಲ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.
"ಆಗಸ್ಟ್ 12 ಮಧ್ಯರಾತ್ರಿ 12.30ಕ್ಕೆ (ಮಾಸ್ಕೋ ಸಮಯ) ಕ್ರೊನೊಟ್ಸ್ಕಿ ನಿಸರ್ಗಧಾಮದ ಬಳಿಯಿರುವ ಕುರಿಲ್ ಸರೋವರಕ್ಕೆ ವಿಟಜ್-ಏರೋ ವಿಮಾನಯಾನ ಸಂಸ್ಥೆಯ Mi-8 ಹೆಲಿಕಾಪ್ಟರ್ ಧರೆಗೆ ಅಪ್ಪಳಿಸಿದೆ. ಪ್ರಾಥಮಿಕ ಪ್ರಕಾರ ಮಾಹಿತಿ, ವಿಮಾನದಲ್ಲಿ ಮೂವರು ಸಿಬ್ಬಂದಿ ಸೇರಿ ಒಟ್ಟು 16 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಷ್ಯಾವು ತುರ್ತು ಕಾರ್ಯಾಚರಣೆ ಕೈಗೊಂಡಿದೆ" ಎಂದು ಸಚಿವಾಲಯ ತಿಳಿಸಿದೆ.
37 ವರ್ಷಗಳ ಹಿಂದೆ ಸೋವಿಯತ್ ಯುಗದಲ್ಲಿ ತಯಾರಿಸಲಾದ ಹೆಲಿಕಾಪ್ಟರ್ Mi-8 ಇದಾಗಿದ್ದು, ಇತ್ತೀಚೆಗೆ ನಿರ್ವಹಣೆಗೆ ಒಳಪಟ್ಟು ಉತ್ತಮ ಕಾರ್ಯಕ್ಷಮತೆ ಹೊಂದಿತ್ತು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.