ನ್ಯೂಯಾರ್ಕ್: ಜಗತ್ತಿನಲ್ಲಿ ಕೋವಿಡ್ ಮಾರಣಾಂತಿಕ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ ಈಗಾಗಲೇ ಪ್ರಕಟವಾದ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದೆ. ವಿಶ್ವದಲ್ಲೇ ಹೆಚ್ಚು ಸಾವುಗಳನ್ನು ಕಂಡ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಜಗತ್ತಿನಾದ್ಯಂತ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇ.22ರಷ್ಟು ಸಾವುಗಳು ಭಾರತದಲ್ಲೇ ಸಂಭವಿಸಿವೆ ಎನ್ನುವುದು ಲ್ಯಾನ್ಸೆಟ್ ಪ್ರಕಟಿಸಿದ ವರದಿಯಲ್ಲಿರುವ ಅಚ್ಚರಿಯ ಅಂಶ.
ಪ್ರಪಂಚದಾದ್ಯಂತ 2020ರ ಜನವರಿ 1ರಿಂದ 2021ರ ಡಿಸೆಂಬರ್ 31ರ ವರೆಗೆ 5.9 ಮಿಲಿಯನ್(53 ಲಕ್ಷ) ಸಾವುಗಳು ಕೋವಿಡ್ನಿಂದಾಗಿವೆ ಎಂದು ಅಧಿಕೃತವಾಗಿ ಹೇಳಲಾಗಿತ್ತು. ಆದರೆ, ಅತ್ಯಂತ ಹಳೆಯ ಮೆಡಿಕಲ್ ಜರ್ನಲ್ ಆಗಿರುವ ಲ್ಯಾನ್ಸೆಟ್ ಎಂಬ ವಾರ ಪತ್ರಿಕೆಯ ವರದಿ ಪ್ರಕಾರ, ಅದೇ 2020ರ ಜನವರಿ 1ರಿಂದ 2021ರ ಡಿಸೆಂಬರ್ 31ರ ಅವಧಿಯೊಳಗೆ 18.2 (1ಕೋಟಿ 80 ಲಕ್ಷಕ್ಕೂ ಹೆಚ್ಚು) ಮಿಲಿಯನ್ ಸಾವುಗಳು ಸಂಭವಿಸಿವೆ. ಇದರಲ್ಲಿ ಶೇ.22ರಷ್ಟು ಸಾವುಗಳು ಭಾರತದಲ್ಲೇ ಆಗಿವೆ ಎಂದು ವಿಶ್ಲೇಷಿಸಲಾಗಿದೆ.
ಭಾರತ ಸರ್ಕಾರದ ಮಾಹಿತಿ ಪ್ರಕಾರ, ಶುಕ್ರವಾರ (ಮಾ.11) ಬೆಳಗ್ಗಿನವರೆಗೆ ಕೋವಿಡ್‌ನಿಂದ 5,15,714 ಜನರು ಸಾವನ್ನಪ್ಪಿದ್ದಾರೆ. ಆದರೆ, ಲ್ಯಾನ್ಸೆಟ್ ವರದಿ ಅನ್ವಯ 2021ರ ಡಿಸೆಂಬರ್ 31ರೊಳಗೇ 4.1 ಮಿಲಿಯನ್ ಅಂದರೆ 41 ಲಕ್ಷ ಜನರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಅರ್ಧದಷ್ಟು ಸಾವುಗಳನ್ನು ಕಂಡ ಏಳು ರಾಷ್ಟ್ರಗಳ ಪೈಕಿ ಭಾರತದಲ್ಲೇ ಅತಿ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿ ಅಂದಾಜಿಸಿದೆ.
ಭಾರತ ಹೊರತುಪಡಿಸಿದರೆ ಅಮೆರಿಕ (1.1 ಮಿಲಿಯನ್), ರಷ್ಯಾ (1.1 ಮಿಲಿಯನ್), ಮೆಕ್ಸಿಕೋ (7,98,000), ಬ್ರೆಜಿಲ್ (7,92,000) ಮತ್ತು ಇಂಡೋನೇಷ್ಯಾ (7,36,000) ಮತ್ತು ಪಾಕಿಸ್ತಾನ (6,64,000)ದಲ್ಲಿ ಅಧಿಕ ಸಾವುಗಳು ಆಗಿದೆ.
ಅದರಲ್ಲೂ, ರಷ್ಯಾದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 375 ಜನರು ಮೃತಪಟ್ಟಿದ್ದಾರೆ. ಮೆಕ್ಸಿಕೋದಲ್ಲಿ ಒಂದು ಲಕ್ಷಕ್ಕೆ 325 ಜನ, ಬ್ರೆಜಿಲ್ನಲ್ಲಿ ಲಕ್ಷಕ್ಕೆ 187 ಜನ ಮತ್ತು ಅಮೆರಿಕದಲ್ಲಿ ಲಕ್ಷಕ್ಕೆ 179 ಮಂದಿ ಸಾವನ್ನಪ್ಪಿದ್ದಾರೆ. ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕಾರಣ ಭಾರತವು ಜಗತ್ತಿನ ಶೇ.22ರಷ್ಟು ಸಾವುಗಳನ್ನು ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇತ್ತ, 5.3 ಮಿಲಿಯನ್ ಹೆಚ್ಚುವರಿ ಸಾವುಗಳನ್ನು ಕಂಡಿರುವ ದಕ್ಷಿಣ ಏಷ್ಯಾದಲ್ಲಿ ಕೋವಿಡ್‌ನಿಂದ ಅಧಿಕ ಸಾವುಗಳ ಸಂಭವಿಸಿವೆ. ನಂತರ ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ (1.7 ಮಿಲಿಯನ್) ಮತ್ತು ಪೂರ್ವ ಯುರೋಪ್ (1.4 ಮಿಲಿಯನ್) ಹೆಚ್ಚು ಸಾವುಗಳಾಗಿವೆ. ಈ ಅಂಕಿ-ಅಂಶಗಳು ಕೋವಿಡ್ ಸೋಂಕಿನ ಪರಿಣಾಮ ತುಂಬಾ ಅಧಿಕವಾಗಿತ್ತು ಎಂಬುವುದನ್ನು ಸೂಚಿಸುತ್ತವೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸ್ವತಂತ್ರ ಜಾಗತಿಕ ಆರೋಗ್ಯ ಸಂಶೋಧನಾ ಕೇಂದ್ರವಾದ ಆರೋಗ್ಯ ಛಂದಶ್ಯಾಸ್ತ್ರ (ಮೆಟ್ರಿಕ್ಸ್) ಮತ್ತು ಮೌಲ್ಯಮಾಪನ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.
ಅಧಿಕೃತವಾಗಿ ವರದಿಯಾದ ಕೋವಿಡ್ ಸಾವಿನ ಸಂಖ್ಯೆ ಮತ್ತು ಹೆಚ್ಚುವರಿ ಸಾವಿನ ಸಂಖ್ಯೆಯನ್ನು ತಾಳೆ ಮಾಡಿದಾಗ ಕೋವಿಡ್ ಸಾವಿನ ಸಂಖ್ಯೆ ಗೊತ್ತಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಅಧಿಕೃತವಾದ ವರದಿಯಾದ ಸಂಖ್ಯೆಕ್ಕಿಂತ 9.5 ಪಟ್ಟು ಅಧಿಕವಾಗಿ ಪತ್ತೆಯಾಗುತ್ತವೆ. ಅದೇ ರೀತಿಯಲ್ಲಿ ಪೂರ್ವ ಯುರೋಪ್ನಲ್ಲಿ 14.2 ಪಟ್ಟು ಹೆಚ್ಚು ಸಾವಿನ ಸಂಖ್ಯೆಗಳು ಕಂಡು ಬರುತ್ತವೆ ಎಂದು ವಿವರಿಸಲಾಗಿದೆ.
ಸಾಂಕ್ರಾಮಿಕದಿಂದ ಸಂಭವಿಸಿದ ನಿಜವಾದ ಸಾವಿನ ಸಂಖ್ಯೆ ತಿಳಿದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ. ಸ್ವೀಡನ್ ಮತ್ತು ನೆದರ್ಲ್ಯಾಂಡ್ ಸೇರಿ ಇತರ ರಾಷ್ಟ್ರಗಳಲ್ಲಿ ನಡೆದ ಅಧ್ಯಯನದ ಪ್ರಕಾರ ನೇರವಾಗಿ ಕೋವಿಡ್‌ನಿಂದ ಉಂಟಾದ ಸಾವಿನ ಬಗ್ಗೆ ಗೊತ್ತಾಗುತ್ತದೆ. ಆದರೆ, ಅನೇಕ ಕಡೆಗಳಲ್ಲಿ ಅಗತ್ಯವಾದ ಪುರಾವೆ ಸಿಗುವುದಿಲ್ಲ. ಮುಂದಿನ ಅಧ್ಯಯನವು ನೇರವಾಗಿ ಕೋವಿಡ್‌ನಿಂದ ಸಂಭವಿಸಿದ ಸಾವುಗಳು ಮತ್ತು ಪ್ರತ್ಯಕ್ಷವಾಗಿಯೂ ಎಷ್ಟು ಪರಿಣಾಮ ಬೀರಿದೆ ಎಂಬುವುದು ತಿಳಿಯಲು ಸಾಧ್ಯವಾಗಲಿದೆ ಎಂದು ಮುಖ್ಯಲೇಖಕ ಡಾ.ಹೈಡಾಂಗ್ ವಾಂಗ್ ಹೇಳಿದ್ದಾರೆ.