ಬರ್ಲಿನ್ : ಜರ್ಮನಿಯ ಬವೇರಿಯನ್ ಗವರ್ನರ್ ಮಾರ್ಕಸ್ ಸೋಡರ್ ದೇಶದ ಲಾಕ್ ಡೌನ್ ಅನ್ನು ಜನವರಿ ಅಂತ್ಯದವರೆಗೆ ವಿಸ್ತರಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದ್ದು, ಶಾಲೆಗಳನ್ನು ಪುನರಾರಂಭಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜರ್ಮನಿಯಲ್ಲಿ ನವೆಂಬರ್ ಪ್ರಾರಂಭದಲ್ಲಿ ಭಾಗಶಃ ಲಾಕ್ ಡೌನ್ ಘೋಷಿಸಲಾಗಿತ್ತು. ಬಳಿಕ ಡಿಸೆಂಬರ್ 16 ರಿಂದ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಸದ್ಯ, ಜನವರಿ 10 ರವರೆಗೆ ಸಂಪೂರ್ಣ ಲಾಕ್ ಡೌನ್ ಇದೆ. ಇದನ್ನು ಜನವರಿ ಅಂತ್ಯದವರೆಗೆ ವಿಸ್ತರಿಸಬೇಕೆಂದು ಗವರ್ನರ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮಂಗಳವಾರ ನಡೆಯಲಿರುವ ಪರಿಶೀಲನಾ ಸಭೆಯಲ್ಲಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಮತ್ತು ಜರ್ಮನಿಯ 16 ರಾಜ್ಯಗಳ ಗವರ್ನರ್ಗಳು ಲಾಕ್ ಡೌನ್ ವಿಸ್ತರಿಸಲು ಸಲಹೆ ನೀಡುವ ಸಾಧ್ಯತೆಯಿದೆ. ಎಷ್ಟರವರೆಗೆ ಲಾಕ್ ಡೌನ್ ವಿಸ್ತರಣೆಯಾಗಲಿದೆ, ಶಾಲೆಗಳು ಯಾವಾಗ ಪುನರಾರಂಭವಾಗಲಿದೆ ಎಂಬುದರ ಬಗ್ಗೆ ತಿಳಿದು ಬರಬೇಕಿದೆ.
ಓದಿ : ಕ್ರಿಸ್ಮಸ್, ಹೊಸವರ್ಷದ ಪರಿಣಾಮ: ಅಮೆರಿಕದಲ್ಲಿ ಉಲ್ಬಣವಾದ ಕೊರೊನಾ
ಬವೇರಿಯನ್ ಗವರ್ನರ್ ಮಾರ್ಕಸ್ ಸೋಡರ್ ದೇಶದ ಲಾಕ್ ಡೌನ್ ಅನ್ನು ಜನವರಿ ಅಂತ್ಯದವರೆಗೆ ವಿಸ್ತರಿಸಬೇಕೆಂದು ಭಾನುವಾರದ ಬಿಲ್ಡ್ ಆಮ್ ಸೊಂಟಾಗ್ ಪತ್ರಿಕೆಗೆ ತಿಳಿಸಿದ್ದಾರೆ. ಅವರಸರದಿಂದ ಮಾಡುವ ಕೆಲಸ ನಮ್ಮನ್ನು ಮತ್ತಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಪಕ್ಕದ ಆಸ್ಟ್ರೀಯ ರೀತಿ ತೆರೆಯುವುದು, ಮುಚ್ಚುವ ಕೆಲಸ ಮಾಡಲ್ಲ ಎಂದು ಸೋಡರ್ ಅಭಿಪ್ರಾಯಪಟ್ಟಿದ್ದಾರೆ.