ಪ್ಯಾರಿಸ್: ಗುರುವಾರ ಮಧ್ಯರಾತ್ರಿಯಿಂದ ಡಿಸೆಂಬರ್ 1 ರವರೆಗೆ ಎರಡನೇ ಬಾರಿಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಘೋಷಿಸಿದ್ದಾರೆ. ಆದರೆ, ಶಾಲೆಗಳಿಗೆ ಲಾಕ್‌ಡೌನ್ ನಿಯಮ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕೋವಿಡ್ ಸೋಂಕಿನಿಂದಾಗಿ ಮಂಗಳವಾರ ಒಂದೇ ದಿನ 520 ಕ್ಕೂ ಹೆಚ್ಚು ಸಾವು ದಾಖಲಾಗಿದ್ದು, ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಾಮಾರಿಯ ವಿರುದ್ಧ ಹೋರಾಡಲು ಈ ಕ್ರಮ ಏಕೈಕ ಮಾರ್ಗ ಎಂದು ಫ್ರೆಂಚ್ ಅಧ್ಯಕ್ಷರು ಹೇಳಿದ್ದಾರೆ.
"ಶುಕ್ರವಾರದ ಹೊತ್ತಿಗೆ ನಾವು ಈ ಹಿಂದೆ ವೈರಸ್ ಹರಡುವಿಕೆಯನ್ನು ತಡೆಹಿಡಿಯಲು ನೆರವಾದ ಲಾಕ್‌ಡೌನ್‌ಗೆ ಮತ್ತೆ ಹಿಂತಿರುಗಲು ನಿರ್ಧರಿಸಿದ್ದೇವೆ" ಎಂದು ಅವರು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾದ ಭಾಷಣದಲ್ಲಿ ಹೇಳಿದ್ದಾರೆ.
ಫ್ರಾನ್ಸ್‌ನ ಎಲ್ಲಾ ಹೋಟೆಲ್‌ಗಳು, ಬಾರ್‌ಗಳು ಹಾಗು ಅನಿವಾರ್ಯವಲ್ಲದ ವ್ಯವಹಾರಗಳನ್ನು ಶುಕ್ರವಾರದಿಂದ ಮುಚ್ಚುವಂತೆ ಆದೇಶಿಸಲಾಗಿದೆ. ಜನರು ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಬೇಕು. ಆದರೆ, ಕಾರ್ಖಾನೆಗಳು, ಹೊಲ ಮತ್ತು ನಿರ್ಮಾಣ ತಾಣಗಳಲ್ಲಿ ಕೆಲಸ ಮಾಡುವವರು ಕಾರ್ಯನಿರ್ವಹಿಸುವುದನ್ನು ಮುಂದುವರಿಸಬಹುದು ಎಂದು ತಿಳಿಸಲಾಗಿದೆ.