ಸ್ಟ್ರಾಸ್ಬರ್ಗ್: ಫ್ರಾನ್ಸ್ನಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ತಪಾಸಣೆ ನಡೆಸಿದ್ದ ನಾಲ್ವರು ವೈದ್ಯರು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ 19 ಸೋಂಕಿತರ ತಪಾಸಣೆ ನಡೆಸಿದ್ದ ಒಟ್ಟು ಐವರು ವೈದ್ಯರು ಈವರೆಗೆ ಮೃತಪಟ್ಟಿದ್ದಾರೆ. ಈ ವೈದ್ಯರಲ್ಲಿ ಸ್ವಿಟ್ಜರ್ಲ್ಯಾಂಡ್ ಮತ್ತು ಜರ್ಮನಿಯ ಗಡಿಯ ಸಮೀಪವಿರುವ ಮಲ್ಹೌಸ್ನಲ್ಲಿನ 66 ವರ್ಷದ ಸ್ತ್ರೀರೋಗತಜ್ಞರು, ಸಮಾಲೋಚನೆಯ ವೇಳೆ ರೋಗಿಯೊಬ್ಬರಿಂದ ಸೋಂಕಿಗೆ ಒಳಗಾಗಿದ್ದರು. ಬಳಿಕ ಇವರು ಸೋಂಕಿನಿಂದ ಮೃತಪಟ್ಟಿದ್ದಾರೆ.
ಇನ್ನೊಬ್ಬರು ಜರ್ಮನಿ ಗಡಿ ಸಮೀಪದ ಮೆಟ್ಜ್ ಬಳಿಯ ಸೇಂಟ್ ಅವೋಲ್ಡ್ ಆಸ್ಪತ್ರೆಯಲ್ಲಿ 60 ವರ್ಷದ ಜನರಲ್ ಚಿಕಿತ್ಸಕನಾಗಿದ್ದ ವೈದ್ಯನೊಬ್ಬ ಮೃತಪಟ್ಟಿದ್ದಾರೆ ಎಂದು ಪಟ್ಟಣದ ಮೇಯರ್ ಸ್ಪಷ್ಟಪಡಿಸಿದ್ದಾರೆ.
ಉತ್ತರ ಓಯಿಸ್ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದವರಲ್ಲಿ ಮೊದಲಿಗರಾಗಿದ್ದ 67 ವರ್ಷದ ವೈದ್ಯ ಸಹ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದರು. ಫ್ರಾನ್ಸ್‌ನ ಪೂರ್ವ ನಗರದ ಕೋಲ್ಮಾರ್ ಆಸ್ಪತ್ರೆಯಲ್ಲಿ 70 ವರ್ಷದ ಸಾಮಾನ್ಯ ವೈದ್ಯರು ಕೂಡ ಸಾವನ್ನಪ್ಪಿದ್ದಾರೆ.
68 ವರ್ಷದ ಮತ್ತೊಬ್ಬ ವೈದ್ಯ ದಕ್ಷಿಣ ಫ್ರಾನ್ಸ್‌ನ ಟ್ರೆವೆನನ್ಸ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಫ್ರಾನ್ಸ್ನಲ್ಲಿ ಕೋವಿಡ್ 19 ಸೋಂಕಿಗೆ ಇದುವರೆಗೂ 674 ಜನ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯಲ್ಲಿ 112 ಜನ ಸೋಂಕಿತರಾಗಿದ್ದಾರೆ. ಕಳೆದ ಭಾನುವಾರದಿಂದ ವೈರಸ್ ಏಕಾಏಕಿ ವ್ಯಾಪಕವಾಗಿ ಹರಡಿ ತೀವ್ರವಾದ ಹಾನಿ ಉಂಟು ಮಾಡುತ್ತಿದೆ.