ಬರ್ಲಿನ್(ಜರ್ಮನ್):ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವನಾಗಿ ಸೇವೆ ಸಲ್ಲಿಸಿದ್ದ ಸೈಯದ್ ಅಹ್ಮದ್ ಶಾ ಸಾದೀತ್ ಇದೀಗ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ವರದಿಯಾಗಿದ್ದು, ಇದಕ್ಕೆ ಪುಷ್ಟಿ ನೀಡುವ ಅವರ ಕೆಲವೊಂದು ಫೋಟೋಗಳು ವೈರಲ್ ಆಗಿವೆ.
ಜರ್ಮನಿಯ ಲೀಪ್ಜಿಗ್ ನಗರದಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿರುವ ಫೋಟೋ ವೈರಲ್ ಆಗಿದೆ. 2018ರಲ್ಲಿ ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ ಸೈಯದ್ ಅಹ್ಮದ್ ಶಾ ಸಚಿವರಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, 2020ರಲ್ಲಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಜರ್ಮನಿಗೆ ಬಂದು ನೆಲೆಸಿದ್ದರು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಕಮ್ಯುನಿಕೇಷನ್ ಹಾಗೂ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಡಿಗ್ರಿ ಪಡೆದುಕೊಂಡಿರುವ ಇವರು, ಸದ್ಯ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜರ್ಮನ್ ಪತ್ರಕರ್ತರೊಬ್ಬರು ಇವರ ಕೆಲವೊಂದು ಫೋಟೋ ಶೇರ್ ಮಾಡಿದ್ದಾರೆ. ಅವರನ್ನು ಮಾತನಾಡಿಸಿದಾಗ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆಂದು ಬರೆದುಕೊಂಡಿದ್ದಾರೆ.