ಲಂಡನ್:ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ಅವರಿಗೆ ಕಳೆದ ಕೆಲವು ವರ್ಷಗಳು ಸವಾಲಿನ ದಿನಗಳಾಗಿತ್ತು ಎಂದು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಾಜಮನೆತನವು ನನ್ನನ್ನು ರಕ್ಷಿಸುವುದಿಲ್ಲ ಎಂಬುದು ಪ್ರಿನ್ಸ್ ಹ್ಯಾರಿಯನ್ನು ವಿವಾಹವಾದ ನಂತರ ನನಗೆ ಸ್ಪಷ್ಟವಾಗಿ ಮನವರಿಕೆಯಾಯಿತು ಎಂದು ಮೇಘನ್ ಮಾರ್ಕೆಲ್ ಅವರು ಖ್ಯಾತ ಟಾಕ್ ಶೋ ನಿರೂಪಕಿ ಓಪ್ರಾ ವಿನ್‌ಫ್ರೇಗೆ ನೀಡಿರುವ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ವಿಚಾರವೀಗ ಭಾರಿ ಸದ್ದು ಮಾಡುತ್ತಿದೆ.
ನನ್ನನ್ನು ಬಿಟ್ಟು, ಕುಟುಂಬದ ಇತರ ಸದಸ್ಯರನ್ನು ರಕ್ಷಿಸಿಕೊಳ್ಳಲು ಅವರು ಸುಳ್ಳು ಹೇಳಲು ಸಿದ್ಧರಿದ್ದರು. ನನ್ನನ್ನು ಮತ್ತು ನನ್ನ ಪತಿಯನ್ನು ರಕ್ಷಿಸಲು ಸತ್ಯವನ್ನು ಹೇಳಲು ಅವರು ಸಿದ್ಧರಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ನನ್ನ ಮಗ ಆರ್ಚಿ ಗರ್ಭದಲ್ಲಿದ್ದಾಗ ರಾಜಮನೆತನ ಆತಂಕದಲ್ಲಿತ್ತು. ಏಕೆಂದರೆ ಮಗುವಿನ ಮೈಬಣ್ಣ ಕಪ್ಪಾಗಿರಬಹುದು ಎಂಬೆಲ್ಲ ಚರ್ಚೆಗಳು ಅಲ್ಲಿ ನಡೆಯುತ್ತಿದ್ದವು ಎಂದು ಮೇಘನ್ ಸಂದರ್ಶನದ ವೇಳೆ ಹೇಳಿದ್ದಾರೆ. ಈ ಹೇಳಿಕೆಯನ್ನು ಕೇಳಿದ ನಿರೂಪಕಿ ಆಶ್ಷರ್ಯಚಕಿತರಾಗಿದ್ದರು.
ಇನ್ನು ಮೇಘನ್‌ಗೆ ರಾಜಕುಮಾರ ಹ್ಯಾರಿ ಈ ವಿಷಯ ತಿಳಿಸಿದ್ದರು. ಆದರೆ, ಹ್ಯಾರಿಗೆ ಯಾರು ಈ ಮಾತು ಹೇಳಿದ್ದರು ಎಂಬುದನ್ನು ಮೇಘನ್ ಬಹಿರಂಗಪಡಿಸಲು ನಿರಾಕರಿಸಿದರು. ಅವರ ಹೆಸರು ಬಹಿರಂಗಪಡಿಸುವುದು 'ಬಹಳ ಹಾನಿಕರ' ಎಂದು ಮೇಘನ್ ಹೇಳಿಕೊಂಡಿದ್ದಾರೆ. ಅಲ್ಲದೇ, ರಾಜಕುಮಾರನ ಸ್ಥಾನವನ್ನು ನೀಡಲಾಗುವುದಿಲ್ಲ, ರಕ್ಷಣೆಯೂ ಸಿಗುವುದಿಲ್ಲ ಎಂಬ ಮಾತು ರಾಜಮನೆತನದಲ್ಲಿ ಕೇಳಿಬಂದಿತ್ತು ಎಂದು ಹ್ಯಾರಿ ಹೇಳಿದ್ದಾರೆ.
ವಿಚ್ಛೇದಿತಳು, ಅಮೆರಿಕನ್ ಮೂಲದ ನಟಿಯಾಗಿದ್ದೂ ರಾಜಮನೆತನ ಸೇರಿದ್ದರ ಬಗ್ಗೆ ನಾನು ಎಂದೂ ಯೋಚನೆ ಮಾಡಿರಲಿಲ್ಲ. ಆದರೆ, ಅವರು ಅದನ್ನೇ ಯೋಚನೆ ಮಾಡುತ್ತಿದ್ದರು. ನನ್ನನ್ನೂ ಚಿಂತೆಗೆ ದೂಡಿದರು. ರಾಜಮನೆತನವೊಂದೇ ನನ್ನೊಂದಿಗೆ ಹೀಗೆ ನಡೆದುಕೊಳ್ಳಲಿಲ್ಲ. ಅದರ ಹಿಂದಿನ ಜನರೂ ನನ್ನೊಂದಿಗೆ ಇದೇ ರೀತಿ ವರ್ತಿಸಿದರು ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದಿಷ್ಟೇ ಅಲ್ಲ, ಬ್ರಿಟಿಷ್ ರಾಣಿ ನನಗೆ ಯಾವತ್ತಿಗೂ ವಿಸ್ಮಯವಾಗಿಯೇ ಉಳಿದಿದ್ದಾರೆ. ನಾನು ರಾಜಕುಮಾರ ಹ್ಯಾರಿಯನ್ನು ಮದುವೆಯಾಗಿ ಹೋದ ನಂತರ ಅಲ್ಲಿ ನನಗೇನು ಕೆಲಸ ಎಂಬುದೇ ನನಗೆ ಅರಿವಾಗಲಿಲ್ಲ ಎಂದು ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ರಾಜಮನೆತನ ಯಾವುದೇ ಉತ್ತರ ಕೊಡಲು ನಿರಾಕರಿಸಿದೆ. ಈ ಬಗ್ಗೆ ಮಾತನಾಡಿರು ರಾಣಿ ಎಲಿಜಬೆತ್, ಈ ವಿಚಾರದಿಂದ ರಾಜಕುಟುಂಬ ದುಃಖಿತವಾಗಿದೆ ಎಂದಿದ್ದಾರೆ.