ಲಂಡನ್:ಭಾರಿ ಬಿರುಗಾಳಿ, ಮಳೆಗೆ ಇಂಗ್ಲೆಂಡ್ ಹಾಗೂ ವೇಲ್ಸ್ ತತ್ತರಿಸಿದೆ. ಕಳೆದ ವಾರಂತ್ಯದಲ್ಲಿ ಸುರಿದ ಭಾರಿ ಮಳೆಗೆ ಹಲವೆಡೆ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಕಳೆದ ವಾರಂತ್ಯದಲ್ಲಿ ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿ ಮತ್ತು 150 ಮಿಲಿಮೀಟರ್ನಷ್ಟು ಸುರಿದ ಮಳೆ ಬ್ರಿಟನ್ ಜನತೆ ಪರದಾಡುವಂತೆ ಮಾಡಿತು. ಯುಕೆ ಹವಾಮಾನ ಇಲಾಖೆ ಹೊರಡಿಸಿದ ಪ್ರವಾಹ ಎಚ್ಚರಿಕೆಗಳು ಸೋಮವಾರದವರೆಗೆ ಬ್ರಿಟನ್ನಲ್ಲಿ ಜಾರಿಯಲ್ಲಿತ್ತು.
ಸದ್ಯ ಗಾಳಿ-ಮಳೆಯ ಆರ್ಭಟ ನಿಂತಿದ್ದು, ಬ್ರಿಟನ್ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಹದಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು, ಜನತೆ ಪರದಾಡುವಂತಾಗಿದೆ. ಬಹುಮಡಿ ಮನೆಗಳಲ್ಲಿ ವಾಸಿಸುತ್ತಿದ್ದ ನಿವಾಸಿಗಳ ರಕ್ಷಣೆಗೆ ಸಿಬ್ಬಂದಿ ಪ್ರಯತ್ನಿಸಿದರಾದರೂ ಹಲವರ ರಕ್ಷಣೆ ಮಾಡುವಲ್ಲಿ ವಿಫಲರಾದರು. ಹಲವು ಕಟ್ಟಡಗಳ ಕೆಳ ಅಂತಸ್ತು ಸಂಪೂರ್ಣ ಜಲಾವೃತಗೊಂಡಿತ್ತು. ಜನರು ಮನೆಯಿಂದ ಹೊರಬರಲಾರದೆ ಪರದಾಡಿದರು.