ಅಥೆನ್ಸ್ (ಗ್ರೀಸ್): ಕಳೆದೊಂದು ವಾರದಿಂದ ಗ್ರೀಸ್‌ನಲ್ಲಿ ಕಾಳ್ಗಿಚ್ಚು ಅಬ್ಬರಿಸುತ್ತಿದ್ದು, ಅಳಿದುಳಿದ ಅರಣ್ಯ ಪ್ರದೇಶಗಳನ್ನೂ ಸುಟ್ಟ ಬಳಿಕ ಜನವಸತಿ ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ತಾಪಮಾನದ ಜೊತೆಗೆ ಬಲವಾಗಿ ಬೀಸುತ್ತಿರುವ ಗಾಳಿಯು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಭಯಾನಕ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ.
ಕಳೆದ 30 ವರ್ಷಗಳಲ್ಲೇ ಅತೀ ಹೆಚ್ಚು ತಾಪಮಾನ ಗ್ರೀಸ್‌ನಲ್ಲಿ ದಾಖಲಾಗಿದ್ದು (45 ಡಿಗ್ರಿ ಸೆಲ್ಸಿಯಸ್), 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜಧಾನಿ ಅಥೆನ್ಸ್ನಲ್ಲಿರುವ ರಾಷ್ಟ್ರೀಯ ಉದ್ಯಾನವನದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ. ಸಾವಿರಾರು ಜನರು ಸಮದ್ರ ಮಾರ್ಗದ ಮೂಲಕ ಪಲಾಯನ ಮಾಡುತ್ತಿದ್ದಾರೆ. ಅಥೆನ್ಸ್ ಮತ್ತು ಇವಿಯಾ ದ್ವೀಪದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಮನೆಮನೆಗೆ ತೆರಳಿ ಜನರನ್ನು ಸ್ಥಳಾಂತರ ಮಾಡುತ್ತಿದ್ದಾರೆ.