ಕೀವ್( ಉಕ್ರೇನ್): ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಉಕ್ರೇನ್‌ನಲ್ಲಿರುವ ಯುರೋಪಿನಲ್ಲೇ ಅತ್ಯಂತ ದೊಡ್ಡದಾದ ಅಣು ಸ್ಥಾವರವಾಗಿದೆ. ಈ ಅಣು ಸ್ಥಾವರದ ಮೇಲೆ ಇಂದು ರಷ್ಯಾ ರಕ್ಷಣಾ ಪಡೆಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಎನರ್‌ಗೋಡರ್‌ನ ಮೇಯರ್ ಹೇಳಿದ್ದಾರೆ.
ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ ಎಂದು ಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ಆನ್‌ಲೈನ್ ಪೋಸ್ಟ್‌ವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಈ ದಾಳಿಯಲ್ಲಿ ಅಪಾರ ಸಾವು ನೋವುಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೂ ಮೊದಲು ರಷ್ಯಾ ಸೈನ್ಯ ಪರಮಾಣು ಸ್ಥಾವರ ವಶಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದು ವರದಿಯಾಗಿತ್ತು. ಇದಕ್ಕಾಗಿ ರಷ್ಯಾ ಪಡೆಗಳು ಟ್ಯಾಂಕ್ಗಳೊಂದಿಗೆ ಜಪೋರಿಝಿಯಾ ಪ್ರವೇಶಿಸಿವೆ ಎಂದು ಹೇಳಲಾಗಿತ್ತು.
ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಕಟ್ಟಡ ಹಾಗೂ ಘಟಕಗಳ ಶತ್ರುಗಳ ನಿರಂತರ ಶೆಲ್ ದಾಳಿಗೊಳಗಾಗಿದ್ದು, ಪರಿಣಾಮವಾಗಿ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಬೆಂಕಿಯುಂಡೆಯಾಗಿದ್ದು, ಧಗಧಗಿಸುತ್ತಿದೆ ಎಂದು ಓರ್ಲೋವ್ ತಮ್ಮ ಟೆಲಿಗ್ರಾಮ್ ಚಾನೆಲ್ ಮೂಲಕ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ಇಂದು ಒಂಬತ್ತನೇ ದಿನ. ಎರಡನೆಯ ಮಹಾಯುದ್ಧದ ನಂತರ ಯೂರೋಪಿಯನ್ ರಾಜ್ಯದ ಮೇಲೆ ನಡೆದ ಅತಿ ದೊಡ್ಡ ದಾಳಿ ಇದಾಗಿದ್ದು, ಸಾವಿರಾರು ಜನರು ಪ್ರಾಣಕಳೆದುಕೊಂಡಿದ್ದಾರೆ. ಇನ್ನು ಅಪಾರ ಪ್ರಮಾಣದಲ್ಲಿ ಜನ ಗಾಯಗೊಂಡಿದ್ದಾರೆ. ಲಕ್ಷಾಂತರ ಜನ ಈ ದಾಳಿಯಿಂದ ಸಂತ್ರಸ್ತರಾಗಿದ್ದಾರೆ. ಉಕ್ರೇನ್‌ನ ರಾಜಧಾನಿ ಕೈವ್‌ನಿಂದ ಉತ್ತರಕ್ಕೆ ಸುಮಾರು 100 ಕಿಲೋಮೀಟರ್ (62 ಮೈಲುಗಳು) ದೂರದಲ್ಲಿರುವ ನಿಷ್ಕ್ರಿಯ ಚೆರ್ನೋಬಿಲ್ ಸ್ಥಾವರವನ್ನು ರಷ್ಯಾ ಈಗಾಗಲೇ ವಶಪಡಿಸಿಕೊಂಡಿದೆ.
ಇದನ್ನು ಓದಿ:ನನ್ನೊಂದಿಗೆ ನೇರವಾಗಿ ಮಾತುಕತೆ ನಡೆಸಿ' ರಷ್ಯಾ ಅಧ್ಯಕ್ಷರಿಗೆ ಸವಾಲು ಹಾಕಿದ ವೊಲೊಡಿಮಿರ್