ಹೆಲ್ಸಿಂಕಿ(ಫಿನ್‌ಲ್ಯಾಂಡ್):ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ವರದಿ ಮಾಡಿದೆ. ಆದರೆ ಲಸಿಕೆ ಪಡೆದವರಲ್ಲಿ ಕೆಲವು ಅಡ್ಡ ಪರಿಣಾಮಗಳು ಕಂಡು ಬಂದ ಬೆನ್ನಲ್ಲೆ ಫಿನ್‌ಲ್ಯಾಂಡ್ ಕೋವಿಡ್ ಲಸಿಕೆಗಳ ಬಳಕೆಯನ್ನು ಅಮಾನತುಗೊಳಿಸಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ.
ಕೊರೊನಾ ನಿಯಂತ್ರಣಕ್ಕಾಗಿ ಎಲ್ಲಾ ದೇಶಗಳಲ್ಲಿ ವ್ಯಾಕ್ಸಿನ್ಗಳನ್ನು ನೀಡಲಾಗುತ್ತಿದೆ. ಅದರಂತೆ ಫಿನ್ಲ್ಯಾಂಡ್ನಲ್ಲೂ ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದೆ. ಆದರೆ ಆಸ್ಟ್ರಾಜೆನೆಕಾ ವ್ಯಾಕ್ಸಿನ್ನ ಮೊದಲ ಡೋಸ್ ಪಡೆದ 4 ರಿಂದ 10 ದಿನಗಳಲ್ಲಿ ಎರಡು ರಕ್ತ ಹೆಪ್ಪುಗಟ್ಟುವಿಕೆಯ ಪ್ರಕರಣಗಳು ವರದಿಯಾಗಿವೆ ಎಂದು ಫಿನ್ನಿಷ್ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಅಂಡ್ ವೆಲ್ಫೇರ್ ಹೇಳಿಕೆಯೊಂದನ್ನು ಅನಾಡೋಲು ಏಜೆನ್ಸಿ ವರದಿ ಮಾಡಿದೆ.
ಈ ಸಂಬಂಧ ವ್ಯಾಕ್ಸಿನ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವವರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಟ್ರಾಜೆನೆಕಾ ಲಸಿಕೆಯ ಬಳಕೆಯನ್ನು ಅಮಾನತು ಮಾಡಿದ್ದು, ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬಂದಿದೆ. ಈ ಸಂಬಂಧ ಮುಂದಿನ ವಾರ ಪರಿಸ್ಥಿತಿ ಅವಲೋಕಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.