ಪ್ಯಾರಿಸ್:ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ(ಎಫ್ಎಟಿಎಫ್) ಅಕ್ಟೋಬರ್ 13ರಿಂದ ಅ.16ರವರೆಗೆ ಪ್ಯಾರಿಸ್ನಲ್ಲಿ ಸಭೆ ಸೇರಲಿದ್ದು, ಪಾಕಿಸ್ತಾನ ಹಾಗೂ ಭಾರತಕ್ಕೆ ಈ ಸಭೆ ಅತ್ಯಂತ ಪ್ರಮುಖವಾಗಿದೆ.
ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಪಾಕಿಸ್ತಾನ ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದೆ ಮತ್ತು ಕಪ್ಪುಪಟ್ಟಿಗೆ ಸೇರ್ಪಡೆಯ ವಿಚಾರವೂ ಈ ಸಭೆಯಲ್ಲಿ ಪ್ರಸ್ತಾಪವಾಗಲಿದೆ. 2012ರಿಂದ ಬೂದು ಪಟ್ಟಿ(ಗ್ರೇ ಲಿಸ್ಟ್) ಸೇರಿರುವ ಪಾಕಿಸ್ತಾನ 2015-16ರಲ್ಲಿ ಹೊರಗುಳಿದಿತ್ತು.
ಜಿ-7 ರಾಷ್ಟ್ರಗಳು ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ 1989ರಲ್ಲಿ ಪ್ರಾರಂಭಿಸಿತ್ತು. ಅಕ್ರಮ ಹಣ ವ್ಯವಹಾರ ಹಾಗೂ ಭಯೋತ್ಪಾದನೆ ಪೋಷಿಸುವ ರಾಷ್ಟ್ರದ ವಿರುದ್ಧ ಕ್ರಮ ಕೈಗೊಳ್ಳಲು ಎಫ್ಎಟಿಎಫ್ ಅಸ್ತಿತ್ವಕ್ಕೆ ಬಂದಿತ್ತು. ಎಫ್ಎಟಿಎಫ್ನಲ್ಲಿ ಭಾರತ ಸೇರಿದಂತೆ 37 ಸದಸ್ಯ ರಾಷ್ಟ್ರಗಳಿವೆ. ಈ ಸಂಘಟನೆಯಲ್ಲಿ ಪಾಕಿಸ್ತಾನ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.
ಭಯೋತ್ಪಾದನೆಗೆ ಬಂಡವಾಳದ ನೆರವು ಹಾಗೂ ಅಕ್ರಮ ಹಣ ವ್ಯವಹಾರ ನಿಗ್ರಹಕ್ಕೆ ಹತ್ತು ವರ್ಷದ ಹಿಂದೆ 40 ಅಂಶಗಳನ್ನು ರಚಿಸಿತ್ತು. ಈ 40 ಅಂಶಗಳಲ್ಲಿ 2018ಕ್ಕೆ ಅನ್ವಯವಾಗುವಂತೆ ಪಾಕಿಸ್ತಾನ ಹಲವು ಅಂಶಗಳಲ್ಲಿ ಸಾಕಷ್ಟು ಹಿಂದುಳಿದಿತ್ತು ಅರ್ಥಾತ್ ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನ ಪ್ರಗತಿ ಸಾಧಿಸಿಲ್ಲ ಎನ್ನುವ ವಿಚಾರ ಎಫ್ಎಟಿಎಫ್ಗೆ ಸಲ್ಲಿಕೆಯಾದ ವರದಿಯಲ್ಲಿ ಉಲ್ಲೇಖವಾಗಿತ್ತು.
2018ರ ಫೆಬ್ರವರಿಯಲ್ಲಿ ಪಾಕಿಸ್ತಾನ ಕೆಲ ಪ್ರಮುಖ ಉಗ್ರರನ್ನು ಬಂಧಿಸಿತ್ತು. ಭಯೋತ್ಪಾದನೆ ನಿಗ್ರಹದಲ್ಲಿ ತಾವು ಸಕ್ರಿಯರಾಗಿದ್ದೇವೆ ಎನ್ನುವ ಸಂದೇಶ ಸಾರಲು ಪಾಕಿಸ್ತಾನ ಈ ನಡೆ ಅನುಸರಿಸಿತ್ತು.
ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿದರೆ ಏನಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೇ ಪಾಕಿಸ್ತಾನದ ಆರ್ಥಿಕತೆ ಹಳ್ಳ ಹಿಡಿದಿದೆ. 'ನಯಾ ಪಾಕಿಸ್ತಾನ್' ಎನ್ನುತ್ತಲೇ ಅಧಿಕಾರಕ್ಕೆ ಏರಿದ್ದ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನವನ್ನು ಮತ್ತಷ್ಟು ದುರ್ಬರಗೊಳಿಸಿದ್ದಾರೆ.
ಪಾಕ್ ಕಪ್ಪುಪಟ್ಟಿಗೆ ಸೇರಿದರೆ ಏನಾಗಲಿದೆ..?
- ಪಾಕಿಸ್ತಾನದಲ್ಲಿ ಈಗಾಗಲೇ ಹೂಡಿಕೆ ಮಾಡಿರುವ ಕಂಪನಿಗಳು ಹಿಂದೆಸರಿಯಬಹುದು.
- ವಿದೇಶಿ ಕರೆನ್ಸಿ ವಹಿವಾಟು ಮತ್ತು ಪಾಕಿಸ್ತಾನದ ರೂಪಾಯಿ ಮೌಲ್ಯ ಕನಿಷ್ಠಮಟ್ಟಕ್ಕೆ ಕುಸಿಯಬಹುದು.
- ಪಾಕಿಸ್ತಾನದ ಷೇರುಮಾರುಕಟ್ಟೆ ಮಹಾಪತನ ನಿಶ್ಚಿತ
- ವಿದೇಶಿ ವಿನಿಮಯ ನಿಕ್ಷೇಪಗಳು ವೇಗವಾಗಿ ನಾಶವಾಗಬಹುದು.
- ಹಣದುಬ್ಬರ ಹಿಡಿತಕ್ಕೇ ಸಿಗದಷ್ಟು ಏರಿಕೆಯಾಗಬಹುದು
- ಪಾಕಿಸ್ತಾನದೊಂದಿಗೆ ವ್ಯಾಪಾರ ಮಾಡುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು. ದೇಶಕ್ಕೆ ಹೆಚ್ಚಿನ ಸಾಲಗಳಿ ಸಿಗದಿರಬಹುದು.
- ಜಾಗತಿಕ ನೆರವು ಮತ್ತು ಸಹಾಯಗಳು ಸ್ಥಗಿತವಾಗಬಹುದು.
- ವಾಣಿಜ್ಯ ವ್ಯವಹಾರ ನೆಲಕಚ್ಚಬಹುದು.
ಪಾಕಿಸ್ತಾನದ ನಡೆಗಳೇ ಕಪ್ಪುಪಟ್ಟಿಗೆ ಸೇರಿಸುವಂತಿದ್ದು, ಒಂದು ವೇಳೆ ಕಪ್ಪುಪಟ್ಟಿಗೆ ಸೇರದಿದ್ದರೂ ಈಗಿರುವ ಬೂದುಪಟ್ಟಿಯಲ್ಲಿ ಮುಂದುವರೆಯುವುದು ನಿಶ್ಚಿತ. ಈ ವಿಚಾರದಲ್ಲಿ ಪಾಕಿಸ್ತಾದ ಸಹಾಯ ಚೀನಾ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.