ಬ್ರಸೆಲ್ಸ್:ಯುರೋಪ್ ಪಾರ್ಲಿಮೆಂಟ್, ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ತನ್ನ ಉನ್ನತ ಮಾನವ ಹಕ್ಕುಗಳ ಬಹುಮಾನದ ಮಾಜಿ ವಿಜೇತರ ಗುಂಪಿನಿಂದ ಅಮಾನತುಗೊಳಿಸಿದೆ.
ರೋಹಿಂಗ್ಯಾ ಜನಾಂಗದ ಮೇಲಿನ ದಬ್ಬಾಳಿಕೆಯನ್ನು ಅವರು ಒಪ್ಪಿಕೊಂಡಿದ್ದು, ಅದರ ವಿರುದ್ಧ ಕಾರ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದರಿಂದ ಯುರೋಪ್ ಪಾರ್ಲಿಮೆಂಟ್ ಈ ನಿರ್ಧಾರಕ್ಕೆ ಬಂದಿದೆ.
ಅಧಿಕಾರಕ್ಕೆ ಬರುವ ಮೊದಲು ದೀರ್ಘಕಾಲದ ರಾಜಕೀಯ ಕೈದಿಯಾಗಿದ್ದ ಸೂಕಿ, ಮ್ಯಾನ್ಮಾರ್‌ನ ಮಿಲಿಟರಿ ಆಡಳಿತದ ವಿರುದ್ಧದ ಅಹಿಂಸಾತ್ಮಕ ಹೋರಾಟಕ್ಕಾಗಿ ಮೆಚ್ಚುಗೆ ಪಡೆದಿದ್ದರು ಮತ್ತು 1991ರ ಶಾಂತಿ ನೊಬೆಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಆದರೆ ಇತ್ತೀಚಿನ ವರ್ಷಗಳಲ್ಲಿ, ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ಮೇಲಿನ ದಬ್ಬಾಳಿಕೆಯಿಂದಾಗಿ ಆವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿರಸ್ಕರಿಸಲಾಗಿದೆ. 2017 ರಲ್ಲಿ ಸೈನ್ಯದ ಕ್ರೂರ ಪ್ರತಿದಾಳಿ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು.
ಆಂಗ್ ಸಾನ್ ಸೂಕಿ ಅವರನ್ನು ಅಧಿಕೃತವಾಗಿ ಸಖರೋವ್ ಪ್ರಶಸ್ತಿ ಪುರಸ್ಕೃತರ ಸಮುದಾಯದ ಎಲ್ಲಾ ಚಟುವಟಿಕೆಗಳಿಂದ ಹೊರಗಿಡುವ ನಿರ್ಧಾರ ಮಾಡಲಾಗಿದೆ. ಅವರು ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದು, ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಸಮುದಾಯದ ವಿರುದ್ಧ ನಡೆಯುತ್ತಿರುವ ಅಪರಾಧಗಳನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ಯುರೋಪ್ ಸಂಸತ್ತು ತಿಳಿಸಿದೆ.