ಲಂಡನ್:ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ 1919ರಲ್ಲಿ ಜಲಿಯನ್ ವಾಲಾಬಾಗ್ನಲ್ಲಿ ಹೋರಾಟ ನಡೆಸುತ್ತಿದ್ದವರ ಸಾಮೂಹಿಕ ಹತ್ಯಾಕಾಂಡ ಕುರಿತು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಸಂಸತ್ನಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಡೆಸಿದ್ದ ದಬ್ಬಾಳಿಕೆ ಹಾಗೂ ಹತ್ಯಾಕಾಂಡಗಳ ಬಗ್ಗೆ ಕ್ಷಮೆ ಕೋರಬೇಕೆಂಬ ಕೂಗು ಆಗಾಗ ಪ್ರತಿಧ್ವನಿಸುತ್ತಿತ್ತು. ಏಪ್ರಿಲ್ 13ಕ್ಕೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬ್ರಿಟನ್ ಸಂಸತ್ನಲ್ಲಿ ಈ ವಿಚಾರ ಪ್ರಸ್ತಾಪಿಸಿ ಥೆರೆಸಾ ಮೇ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಬ್ರಿಟಿಷ್ ಆಡಳಿತ ನಡೆಸಿದ್ದ ಈ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಥೆರೆಸಾ ಮೇ ಸಂಪೂರ್ಣ ಕ್ಷಮೆ ಕೋರಲಿಲ್ಲ. ಪ್ರಮುಖ ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷದ ನಾಯಕನಾಗಿರುವ ಜೆರೆಮಿ ಕಾರ್ಬೋನ್ ಅವರು ಸಂಪೂರ್ಣ ಕ್ಷಮೆಕೋರಲು ಪ್ರಧಾನಿಗೆ ಆಗ್ರಹಿಸಿದರು.'ಈ ಹಿಂದೆ ಏನಾಯಿತು ಅದರಿಂದ ಆದ ಹಾನಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ ಎಂದು ತೆರೇಸಾ ಮೇ ಹೇಳಿದ್ದಾರೆ.
ಈ ಘಟನೆಯಲ್ಲಿ ಸುಮಾರು 400 ಸ್ವಾತಂತ್ರ್ಯ ಹೋರಾಟಗಾರರು ಸಾವನ್ನಪ್ಪಿದರು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ ಎನ್ನಲಾಗಿದೆ. ಆದರೆ, ಭಾರತೀಯ ಅಂಕಿ-ಅಂಶಗಳ ಪ್ರಕಾರ, ಸುಮಾರು ಸಾವಿರ ಜನರು ಎಂದು ಹೇಳಲಾಗುತ್ತದೆ. 2013 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮೆರಾನ್, 'ಇದು ಒಂದು ತೀವ್ರ ಅವಮಾನಕರ ಘಟನೆ' ಎಂದು ಹೇಳಿದ್ದರೆ ಹೊರತು ಕ್ಷಮಾಪಣೆ ಕೂಡ ಕೋರಿರಲಿಲ್ಲ. ಅಂತಹದೇ ಸೂಕ್ಷ್ಮ ನಡೆಯನ್ನು ಥೆರೆಸಾ ಮೇ ಅನುಸರಿಸಿದ್ದಾರೆ.