ಪ್ರೇಗ್(ಜೆಕ್ ಗಣರಾಜ್ಯ):ಕೋವಿಡ್ ಲಸಿಕೆಗೆ ವಿರೋಧ ವ್ಯಕ್ತಪಡಿಸಿ, ಸ್ವಯಂ ಪ್ರೇರಿತವಾಗಿ ಕೊರೊನಾ ಸೋಂಕನ್ನು ಅಂಟಿಸಿಕೊಂಡಿದ್ದ ಆ್ಯಂಟಿ-ವ್ಯಾಕ್ಸ್ ಜೆಕ್ ಜಾನಪದ ಗಾಯಕಿ ಹನಾ ಹೊರ್ಕಾ ಮೃತಪಟ್ಟಿದ್ದಾರೆ. ಜನವರಿ 16 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಸೋನಾನ್ಸ್ ಬ್ಯಾಂಡ್‌ಗೆ ಗಾಯಕರಾಗಿದ್ದ ಹನಾ ಹೊರ್ಕಾ ತಮ್ಮ 57 ನೇ ವಯಸ್ಸಿನಲ್ಲಿ ಕಳೆದ ಭಾನುವಾರ ನಿಧನರಾದರು ಎಂದು ಅವರ ಪುತ್ರ ಜಾನ್ ರೆಕ್ ಹೇಳಿದ್ದಾರೆ.
ಕಳೆದ ವರ್ಷದ ಕ್ರಿಸ್‌ಮಸ್‌ಗೂ ಮುನ್ನ ಈಕೆಯ ಪತಿ ಹಾಗೂ ಪುತ್ರ ಲಸಿಕೆ ಹಾಕಿಸಿಕೊಂಡಾಗ ಇದನ್ನು ಹನಾ ತೀವ್ರವಾಗಿ ವಿರೋಧಿಸಿದ್ದರು. ಜೊತೆಗೆ ಸ್ವಯಂಪ್ರೇರಣೆಯಿಂದ ವೈರಸ್‌ಗೆ ಒಡ್ಡಿಕೊಂಡಿದ್ದರು. ಲಸಿಕೆಯನ್ನು ಪಡೆಯದೆಯೇ ಅವರು ಸಾಮಾನ್ಯವಾಗಿ ಬದುಕಲು ನಿರ್ಧರಿಸಿದ್ದರು. ವ್ಯಾಕ್ಸಿನೇಷನ್ ಮಾಡುವುದಕ್ಕಿಂತ ರೋಗವನ್ನೇ ಅಂಟಿಸಿಕೊಳ್ಳಲು ಆದ್ಯತೆ ನೀಡಿದ್ದರು ಎಂದು ಹೇಳಿದ್ದಾರೆ.
ಕೋವಿಡ್ ಅಂಟಿಸಿಕೊಂಡ ಬಳಿಕ ಸ್ಥಿತಿ ತೀವ್ರವಾಗಿದ್ದರೂ ನಾನು ಬದುಕುಳಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದ ಎರಡೇ ದಿನಕ್ಕೆ ಖ್ಯಾತ ಗಾಯಕಿ ಹನಾ ಹೊರ್ಕಾ ಮೃತಪಟ್ಟಿದ್ದಾರೆ. 1 ಕೋಟಿ 70 ಸಾವಿರ ಜನರಿರುವ ಜೆಕ್ ಗಣರಾಜ್ಯದಲ್ಲಿ ನಿತ್ಯ 20 ಸಾವಿರ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ.