ಲಂಡನ್:ವಿಶ್ವದಾದ್ಯಂತ ಕೊರೊನಾ ವೈರಸ್ ಸಂಬಂಧಿತ ಸಾವುಗಳು 4 ಮಿಲಿಯನ್ ಗಡಿ ದಾಟಿದೆ. ಈ ನಡುವೆ ಅನೇಕ ಬಡ ದೇಶಗಳು ತನ್ನ ಪ್ರಜೆಗಳಿಗೆ ಲಸಿಕೆ ಹಾಕಿಸಲು ವ್ಯಾಕ್ಸಿನ್ ಕೊರತೆ ಎದುರಿಸುತ್ತಿವೆ.
ಅಮೆರಿಕ ಮತ್ತು ಬ್ರಿಟನ್‌ನಂತಹ ದೇಶಗಳಲ್ಲಿ ಹೊಸ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆಯಾಗಿದೆ. ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಪ್ರಬಲವಾಗಿದೆ. ರಾಯಿಟರ್ಸ್ ಸುದ್ದಿಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ಕೊರೊನಾ ಸಾವಿನ ಸಂಖ್ಯೆ 2 ಮಿಲಿಯನ್ ತಲುಪಲು ಒಂದು ವರ್ಷ ತೆಗೆದುಕೊಂಡಿತು. ಆದರೆ ಮುಂದಿನ 2 ಮಿಲಿಯನ್ ಅನ್ನು ಕೇವಲ 166 ದಿನಗಳಲ್ಲಿ ದಾಖಲಿಸಲಾಗಿದೆ.
ಒಟ್ಟು ಸಾವಿನ ಸಂಖ್ಯೆಯಲ್ಲಿ ಅಗ್ರ ಐದು ದೇಶಗಳು:
ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ ಮತ್ತು ಮೆಕ್ಸಿಕೊ ವಿಶ್ವದಲ್ಲಿನ ಕೊರೊನಾ ಸಾವುಗಳಲ್ಲಿ ಸುಮಾರು ಶೇ 50 ನಷ್ಟು ಪ್ರತಿನಿಧಿಸುತ್ತವೆ. ಆದರೆ ಪೆರು, ಹಂಗೇರಿ, ಬೋಸ್ನಿಯಾ, ಜೆಕ್ ಗಣರಾಜ್ಯ ಮತ್ತು ಜಿಬ್ರಾಲ್ಟರ್ ಅತಿ ಹೆಚ್ಚು ಸಾವಿನ ಪ್ರಮಾಣ ಹೊಂದಿವೆ.
ಲ್ಯಾಟಿನ್ ಅಮೆರಿಕದಲ್ಲಿನ ದೇಶಗಳು ಮಾರ್ಚ್‌ನಿಂದೀಚೆಗೆ ತೀವ್ರವಾದ ಸೋಂಕಿನ ಪ್ರಭಾವವನ್ನು ಎದುರಿಸುತ್ತಿವೆ. ವಿಶ್ವದ ಪ್ರತಿ 100 ಸೋಂಕುಗಳಲ್ಲಿ 43 ಈ ಪ್ರದೇಶದಲ್ಲಿ ವರದಿಯಾಗಿದೆ. ಕಳೆದ ವಾರದಲ್ಲಿ ತಲಾ ಹೆಚ್ಚು ಸಾವುಗಳನ್ನು ವರದಿ ಮಾಡಿದ ಅಗ್ರ ಒಂಬತ್ತು ದೇಶಗಳು ಲ್ಯಾಟಿನ್ ಅಮೆರಿಕದಲ್ಲಿವೆ.