ಬರ್ಲಿನ್ :ರಾಜಕೀಯ ಉದ್ದೇಶಗಳಿಗಾಗಿ ಚೀನಾ ಕೋವಿಡ್ ಲಸಿಕೆ ಬಳಸಿಕೊಳ್ಳುತ್ತಿದೆ ಎಂದು ಜರ್ಮನ್ ವಿದೇಶಾಂಗ ಇಲಾಖೆ ಆರೋಪಿಸಿದೆ. ಚೀನಾ ಮತ್ತು ರಷ್ಯಾ ಕೋವಿಡ್ ಲಸಿಕೆಯನ್ನು ಇತರ ದೇಶಗಳಿಗೆ ನೀಡುವ ಮೂಲಕ ಒಳ್ಳೆಯ ಪ್ರಚಾರ ಪಡೆಯುತ್ತಿವೆ. ಈ ಮೂಲಕ ತಮ್ಮ ಗುರಿಗಳನ್ನು ಸಾಧಿಸುತ್ತಿವೆ ಎಂದು ಜರ್ಮನ್ ವಿದೇಶಾಂಗ ಇಲಾಖೆ ಸಚಿವ ಹೈಕೊ ಮಾಸ್ ದೂರಿದ್ದಾರೆ.
ಚೀನಾ ರಾಜಕೀಯ ಉದ್ದೇಶಗಳಿಗಾಗಿ ಇತರ ದೇಶಗಳಿಗೆ ಕೋವಿಡ್ ಲಸಿಕೆ ನೀಡುತ್ತಿದೆ ಎಂಬುವುದನ್ನು ನಾವು ಗಮನಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಮಿಚಿಗನ್‌ನ ಕಲಾಮಜೂ ಪ್ರವಾಸದಲ್ಲಿರುವ ಮಾಸ್ ಫೈಝರ್ ಲಸಿಕೆ ಉತ್ಪಾದನಾ ಘಟಕಕ್ಕೆ ಅವರು ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಇಂತಹ ನಡವಳಿಕೆ ಬಿಟ್ಟು ಬಿಡಬೇಕು ಎಂದರು.
ಓದಿ : ಒಲಿಂಪಿಕ್ ಉದ್ಘಾಟನಾ ಸಮಾರಂಭಕ್ಕೆ ಅಮೆರಿಕ ನಿಯೋಗ: ಜಿಲ್ ಬೈಡನ್ ನೇತೃತ್ವ
ಚೀನಾದ ಈ ರೀತಿಯ ನಡವಳಿಕೆಯನ್ನು ನಾವು ಟೀಕಿಸುವುದು ಮಾತ್ರವಲ್ಲ, ಕೋವಿಡ್ ಪೀಡಿತ ದೇಶಗಳಿಗೆ ಇತರ ಆಯ್ಕೆಗಳಿಗೆ ಎಂಬುವುದನ್ನು ನಾವು ಖಚಿತಪಡಿಸುತ್ತಿದ್ದೇವೆ. ಪರ್ಯಾಯ ಮಾರ್ಗವೆಂದರೆ, ನಮ್ಮಲ್ಲಿ ಲಸಿಕೆ ಇದೆ ಮತ್ತು ಇತರ ದೇಶಗಳಿಗೆ ಪೂರೈಸಲು ಸಿದ್ದರಿದ್ದೇವೆ ಎಂಬುವುದನ್ನು ನೆನಪಿಸುತ್ತಿದ್ದೇವೆ ಎಂದು ಮಾಸ್ ಹೇಳಿದ್ದಾರೆ.
ಚೀನಾದ ಅಧಿಕಾರಿಗಳು ಇತ್ತೀಚೆಗೆ ತಮ್ಮ ದೇಶವು ಸುಮಾರು 40 ಆಫ್ರಿಕನ್ ದೇಶಗಳಿಗೆ ಕೋವಿಡ್ ಲಸಿಕೆಗಳನ್ನು ನೀಡುತ್ತಿದೆ ಎಂದು ಹೇಳಿದ್ದರು. ಇದನ್ನು ಕೇವಲ ಪರಹಿತ ಚಿಂತನೆಯ ಕಾರಣಗಳಿಗಾಗಿ ಮಾಡಲಾಗುತ್ತಿದೆ ಎಂದಿದ್ದರು.
ಕಳೆದ ತಿಂಗಳು ಜೀನಿವಾದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಲ ರಾಜತಾಂತ್ರಿಕರು, ಚೀನಾ ಲಸಿಕೆ ತಡೆ ಹಿಡಿಯುವ ಬೆದರಿಕೆ ಹಾಕುವ ಮೂಲಕ ಚೀನಾದ ಪಶ್ಚಿಮ ಪ್ರದೇಶವಾದ ಕ್ಸಿನ್‌ಜಿಯಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಬೇಕೆಂಬ ಕರೆಗೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳುವಂತೆ ಉಕ್ರೇನ್‌ಗೆ ಒತ್ತಡ ಹೇರಿದೆ ಎಂದು ಅವರು ಹೇಳಿದ್ದರು.