ಲಂಡನ್:ಮಹಿಳೆವೋರ್ವಳಿಗೆ ಹೃದಯ ಸ್ತಂಭನವಾಗಿ ಹೃದಯ ಬಡಿತ ಸ್ಥಗಿತಗೊಂಡುಆರು ಗಂಟೆಗಳ ಕಾಲ ಶವವಾಗಿದ್ದಳು. ಅಚ್ಚರಿ ಎಂಬಂತೆ ಆಕೆಗೆ ಮತ್ತೆ ಹೃದಯ ಬಡಿತ ಶುರುವಾದ ಪವಾಡಸದೃಶ್ಯ ಘಟನೆ ಲಂಡನ್ನಲ್ಲಿ ನಡೆದಿದೆ.
ಆಡ್ರಿ ಸ್ಕೋಮನ್ (34) ಎಂಬ ಬ್ರಿಟಿಷ್ ಮಹಿಳೆಯೇ ಸಾವಿನ ಮನೆ ಕದ ತಟ್ಟಿ ಬದುಕಿ ಬಂದವರು. ಇದೊಂದು ಅಸಾಧಾರಣ ಪ್ರಕರಣವೆಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಕೋಮನ್ ಅವರು ನವೆಂಬರ್ ತಿಂಗಳಲ್ಲಿ ತನ್ನ ಪತಿಯೊಂದಿಗೆ ಸ್ಪ್ಯಾನಿಷ್ನ ಪೈರಿನೀಸ್ನಲ್ಲಿ ಟ್ರೆಕ್ಕಿಂಗ್ ಹೋಗಿದ್ದರು. ಈ ವೇಳೆ ಹಿಮದ ಬಿರುಗಾಳಿಗೆ ಸಿಲುಕಿದಾಗ ಅವರಿಗೆ ತೀವ್ರ ಲಘುಷ್ಣತೆ ಉಂಟಾಗಿತ್ತು ಎಂದು ಬಿಬಿಸಿ ವರದಿ ಮಾಡಿದೆ.
ಬಾರ್ಸಿಲೋನಾದಲ್ಲಿ ವಾಸಿಸುವ ಸ್ಕೋಮನ್, ಪೈರಿನೀಸ್‌ನ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಮಾತನಾಡಲು ಮತ್ತು ನಡೆಯಲು ಆಗದಂತಹ ಸ್ಥಿತಿಗೆ ತಲುಪಿ ನಂತರ ಪ್ರಜ್ಞೆ ತಪ್ಪಿದ್ದರು. ಆ ವೇಳೆಯಲ್ಲಿ ತುರ್ತು ಆರೋಗ್ಯ ಸೇವೆ ಲಭಿಸದೆ ಆಕೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಇದನ್ನು ಕಂಡ ಪತಿ ರೋಹನ್, ಅವಳು ಮೃತಪಟ್ಟಿದ್ದಾಳೆ ಎಂದು ನಂಬಿದ್ದ.
ಸುಮಾರು ಎರಡು ಗಂಟೆಗಳ ನಂತರ ರಕ್ಷಣಾ ತಂಡವು ಘಟನಾ ಸ್ಥಳಕ್ಕೆ ಬಂದಾಗ ಸ್ಕೋಮನ್ ದೇಹದಲ್ಲಿ ಉಷ್ಣಾಂಶ ಕುಸಿದಿತ್ತು. ತಕ್ಷಣವೇ ಬಾರ್ಸಿಲೋನಾದ ವಾಲ್ ಡಿ ಹೆಬ್ರಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡುವಾಗ ಹುಸಿರಾಟದಂತಹ ಯಾವುದೇ ಪ್ರತಿಕ್ರಿಯೆಗಳು ಕಂಡುಬದಿರಲಿಲ್ಲ. ಆರು ಗಂಟೆಯ ಬಳಿಕ ಏಕಾಏಕಿ ಹೃದಯ ಬಡಿತ ಶುರುವಾಗಿದೆ ಎಂದು ವರದಿಯಾಗಿದೆ.
ಸುಪ್ತಾವಸ್ಥೆಯಲ್ಲಿದ್ದಾಗ ಲಘುಷ್ಣತೆಯು ಅವಳ ದೇಹ ಮತ್ತು ಮೆದುಳನ್ನು ಹದಗೆಡದಂತೆ ರಕ್ಷಿಸಿದೆ. ಇದುವೇ ಅವಳನ್ನು ಸಾವಿನ ಅಂಚಿಗೆ ಕರೆತಂದಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.