ಲಂಡನ್: ನಾಲ್ಕು ವಾರಗಳು ಕಳೆದ್ರೂ ಯುದ್ಧ ನಿಲ್ಲಿಸುವ ತೀರ್ಮಾನಕ್ಕೆ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರು ಮುಂದಾಗುತ್ತಿಲ್ಲ. ಇದರ ಮಧ್ಯೆ ಬ್ರಿಟನ್ ಮತ್ತು ಅಮೆರಿಕ ಸರ್ಕಾರ ಸಾವಿರಾರು ಕ್ಷಿಪಣಿಗಳು ಸೇರಿದಂತೆ ಮಿಲಿಟರಿ ಉಪಕರಣಗಳನ್ನು ಉಕ್ರೇನ್‌ಗೆ ನೀಡಲು ಮುಂದಾಗಿವೆ. ಪ್ರಧಾನಿ ಬೋರಿಸ್ ಜಾನ್ಸನ್ ಸಾವಿರಾರು ಕ್ಷಿಪಣಿಗಳನ್ನು ಉಕ್ರೇನ್‌ಗೆ ಕಳುಹಿಸಲು ಸಜ್ಜಾಗಿದ್ದಾರೆ.
ನ್ಯಾಟೋ ಮತ್ತು ಗ್ರೂಪ್ ಆಫ್ ಸೆವೆನ್‌ನ ನಾಯಕರೊಂದಿಗೆ ಮಾತುಕತೆ ನಡೆಸಲು ಪ್ರಧಾನಿ ಜಾನ್ಸನ್ ಗುರುವಾರ (ಇಂದು) ಬ್ರಸೆಲ್ಸ್‌ಗೆ ಪ್ರಯಾಣಿಸುತ್ತಿದ್ದಾರೆ. ಅವರ ಭೇಟಿಯ ಸಮಯದಲ್ಲಿ ಬ್ರಿಟಿಷ್ ಸರ್ಕಾರ ಉಕ್ರೇನ್‌ಗೆ ಹೆಚ್ಚು ನೆರವು ಒದಗಿಸುವ ನಿರೀಕ್ಷೆಯಿದೆ. ಇದರಲ್ಲಿ ಆ್ಯಂಟಿ - ಟ್ಯಾಂಕ್ ಮತ್ತು ಹೆಚ್ಚು ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ 6,000 ಕ್ಷಿಪಣಿಗಳ ಕೊಡುಗೆಯೂ ಸೇರಿದೆ ಎಂದು ತಿಳಿದು ಬಂದಿದೆ.
ಓದಿ:ಬಿರ್ಭೂಮ್ ಹತ್ಯಾಕಾಂಡ: ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ ದೀದಿ, ಅಪರಾಧಿಗಳನ್ನು ಕ್ಷಮಿಸಬೇಡಿ ಎಂದ ಮೋದಿ
ಉಕ್ರೇನ್‌ಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲವನ್ನು ಹೆಚ್ಚಿಸಲು ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್ ಸರ್ಕಾರ) ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತದೆ. ಈ ಹೋರಾಟದಲ್ಲಿ ಉಕ್ರೇನ್ ರಕ್ಷಣೆಯನ್ನು ಬಲಪಡಿಸುತ್ತದೆ ಎಂದು ಜಾನ್ಸನ್ ಹೇಳಿದ್ದಾರೆ. ಈಗಾಗಲೇ 4,000 ಕ್ಕೂ ಹೆಚ್ಚು ಆ್ಯಂಟಿ-ಟ್ಯಾಂಕ್ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಬ್ರಿಟನ್ ಸರ್ಕಾರ ಕಳುಹಿಸಿದೆ. ರಷ್ಯಾ ಮತ್ತು ಉಕ್ರೇನ್‌ನಲ್ಲಿ ತಪ್ಪು ಮಾಹಿತಿಗಳನ್ನು ಹರಡದಂತೆ ನೋಡಿಕೊಳ್ಳಲು ಬಿಬಿಸಿ ವರ್ಲ್ಡ್ ಸರ್ವೀಸ್‌ಗೆ ತುರ್ತು ನಿಧಿಯಲ್ಲಿ ಸುಮಾರು 4 ಮಿಲಿಯನ್ ಪೌಂಡ್‌ಗಳನ್ನು ($5.3 ಮಿಲಿಯನ್) ಒದಗಿಸುತ್ತಿದೆ ಎಂದು ಜಾನ್ಸನ್ ಸರ್ಕಾರ ಹೇಳುತ್ತಿದೆ.