ಲಂಡನ್ : ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್ನಿಂದುಂಟಾಗುವ ಅನಾರೋಗ್ಯದ ವಿರುದ್ಧ ಬೂಸ್ಟರ್ ಡೋಸ್ ಶೇ.80ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡುತ್ತದೆ ಎಂದು ಯುನೈಟೆಡ್ ಕಿಂಗ್ಡಮ್ನ ಸಂಶೋಧಕರ ತಂಡವೊಂದು ತಿಳಿಸಿದೆ.
ಈ ಹಿಂದಿನ ಕೋವಿಡ್ ರೂಪಾಂತರಿಗಳಿಗೆ ಈ ಮೊದಲು ನೀಡಿರುವ ಕೋವಿಡ್ ಲಸಿಕೆಗಳು ಸರಿಹೋಗಬಹುದು. ಆದರೆ, ಹೊಸ ರೂಪಾಂತರಿ ಒಮಿಕ್ರಾನ್ಗೆ ತುತ್ತಾಗುವ ಜನರು ಆಸ್ಪತ್ರೆಗೆ ದಾಖಲಾಗದಂತೆ ನೋಡಿಕೊಳ್ಳಲು ಬೂಸ್ಟರ್ ಡೋಸ್ ಅವಶ್ಯಕ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕರು ಹೇಳುತ್ತಾರೆ.
ಒಮಿಕ್ರಾನ್ ಅತಿ ವೇಗವಾಗಿ ಪಸರಿಸುತ್ತದೆ ಎಂಬುದನ್ನು ತಜ್ಞರು, ವಿಜ್ಞಾನಿಗಳು ಹೇಳಿದ್ದು, ಬ್ರಿಟನ್ನಲ್ಲಿ ಈಗಾಗಲೇ 25 ಸಾವಿರಕ್ಕೂ ಅಧಿಕ ಒಮಿಕ್ರಾನ್ ಕೇಸ್ ವರದಿಯಾಗಿವೆ. ಈ ಪೈಕಿ ಕಳೆದ 24 ಗಂಟೆಗಳಲ್ಲೇ 10 ಸಾವಿರ ಹೊಸ ರೂಪಾಂತರಿ ಪ್ರಕರಣ ಪತ್ತೆಯಾಗಿವೆ.
ಇದನ್ನೂ ಓದಿ: 5 ವರ್ಷದೊಳಗಿನ ಮಕ್ಕಳಿಗೆ ಮೂರನೇ ಡೋಸ್ ನೀಡಲು ಫೈಜರ್ ಅಧ್ಯಯನ
ಒಮಿಕ್ರಾನ್ ಎಷ್ಟು ಸೌಮ್ಯ ಅಥವಾ ತೀವ್ರವಾಗಿರುತ್ತದೆ ಎಂಬುದನ್ನು ಕಂಡು ಹಿಡಿಯಲು ತಜ್ಞರು ಇನ್ನೂ ಪ್ರಯತ್ನಿಸುತ್ತಿದ್ದಾರೆ. ವೈರಸ್ ವಿರುದ್ಧ ಹೋರಾಡಲು ಪ್ರತಿಕಾಯ ಮಟ್ಟವನ್ನು ಹೆಚ್ಚಿಸಲು ಬೂಸ್ಟರ್ ಡೋಸ್ ಅನ್ನು ಪಡೆಯಲು ಯುನೈಟೆಡ್ ಕಿಂಗ್ಡಮ್ ತನ್ನ ಜನರಿಗೆ ಸಲಹೆ ನೀಡುತ್ತಿದೆ. ಈಗಾಗಲೇ ಬ್ರಿಟನ್ ವಯಸ್ಕ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ.