ವಿಂಡ್ಸರ್( ಇಂಗ್ಲೆಂಡ್) : ಆಡಳಿತಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ವಿದೇಶ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಣಿ ಎಲಿಜಬೆತ್-II ಅವರ ಆತಿಥ್ಯವನ್ನು ಸ್ವೀಕರಿಸಿದ್ದಾರೆ. ನಿನ್ನೆ ಮಧ್ಯಾಹ್ನ ಅಮೆರಿಕದ ಮೊದಲ ಮಹಿಳೆ ಜಿಲ್ ಬೈಡನ್ ಜೊತೆ ಆಗಮಿಸಿದ ಅಧ್ಯಕ್ಷ ಬೈಡನ್, ವಿಂಡ್ಸರ್ ಕ್ಯಾಸೆಲ್‌ನಲ್ಲಿರುವ ರಾಜಮನೆತನದ ರಾಯಲ್ ನಿವಾಸದಲ್ಲಿ ಏರ್ಪಡಿಸಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದರು.
ಲಂಡನ್‌ನಲ್ಲಿ ನಡೆಯುತ್ತಿರುವ 3 ದಿನಗಳ ಶೃಂಗಸಭೆಗಾಗಿ ನೈರುತ್ಯ ಇಂಗ್ಲೆಂಡ್‌ನ ಕಾರ್ನವಾಲ್‌ಗೆ ಬೈಡನ್ ದಂಪತಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಕ್ಯಾಸೆಲ್‌ನ ನಿವಾಸಕ್ಕೆ ಆತಿಥಿಗಳನ್ನು 95 ವರ್ಷದ ರಾಣಿ ಎಲಿಜಬೆತ್ ಖುದ್ದಾಗಿ ಬರಮಾಡಿಕೊಂಡರು. ಬಳಿಕ ಸೇನೆಯ ಗೌರವಗಳೊಂದಿಗೆ ರಾಯಲ್ ಸ್ವಾಗತ ನೀಡಲಾಯಿತು. ನಗು ಮೊಗದಲ್ಲೇ ಬೈಡನ್ ಸೇನಾ ಗೌರವ ಸ್ವೀಕರಿಸಿದರು. ಬಳಿಕ ಅಮೆರಿಕದ ರಾಷ್ಟ್ರಗೀತೆ ಮೊಳಗಿತು. ನಿವಾಸದ ಒಳಗಡೆ ಹೋದ ಬಳಿಕ ರಾಣಿಯೊಂದಿಗೆ ಖಾಸಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.