ಲಂಡನ್:ಪಾಕಿಸ್ತಾನದ ವಿರುದ್ಧ ಮಾತನಾಡಿದ್ದಕ್ಕೆ ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕಿ ಹಾಗೂ ಲೇಖಕಿ ಕರೋಲ್ ಕ್ರಿಸ್ಟಿನ್ ಫೇರ್ ಅವರ ಸಂದರ್ಶನವನ್ನು ಯುನೈಟೆಡ್ ಕಿಂಗ್ಡಮ್ನ ಬಿಬಿಸಿ ಸುದ್ದಿವಾಹಿನಿಯು ಅರ್ಧಕ್ಕೆ ಮೊಟಕುಗೊಳಿಸಿದ ಪ್ರಸಂಗ ಟೀಕೆಗೆ ಗುರಿಯಾಗಿದೆ.
ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಗ್ಗೆ ಇಂದು ಬಿಬಿಸಿಗೆ ಸಂದರ್ಶನ ನೀಡುತ್ತಿದ್ದ ಕ್ರಿಸ್ಟಿನ್ ಫೇರ್, "ಭಯೋತ್ಪಾದಕರಿಗೆ ಪಾಕಿಸ್ತಾನವು ಆಶ್ರಯ ನೀಡಿ, ಪೋಷಣೆ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಉಲ್ಬಣಗೊಳಿಸುವಲ್ಲಿ ಪಾಕಿಸ್ತಾನದ ಪಾತ್ರ ಹೆಚ್ಚಿದೆ. ಪಾಕಿಸ್ತಾನವು ನಿರಾಶ್ರಿತರ ಕಥೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತದೆ" ಎಂದು ಹೇಳುತ್ತಿದ್ದಂತೆಯೇ ಬಿಬಿಸಿ ಸಂದರ್ಶಕಿ ಫಿಲಿಪ್ಪಾ ಥಾಮಸ್, "ಈ ಆರೋಪಗಳನ್ನು ಪಾಕಿಸ್ತಾನವು ಸಂಪೂರ್ಣವಾಗಿ ನಿರಾಕರಿಸುತ್ತದೆ" ಎಂದು ಪ್ರತಿಪಾದಿಸಿದ್ದಾರೆ.
"ಇದು ನಿಮಗೆ ಹೇಗೆ ಗೊತ್ತು?" ಎಂದು ಕ್ರಿಸ್ಟಿನ್ ಫೇರ್ ಪ್ರಶ್ನಿಸಿದ್ದಾರೆ. ಆದರೆ ಸಂದರ್ಶಕಿಯು ಕ್ರಿಸ್ಟಿನ್ ಫೇರ್ರ ಪ್ರಶ್ನೆಯನ್ನು ನಿರ್ಲಕ್ಷಿಸಿ, "ಅಸ್ಥಿರ ಅಫ್ಘಾನಿಸ್ತಾನವನ್ನು ನಿರ್ವಹಿಸುವುದು ಪಾಕಿಸ್ತಾನಕ್ಕೆ ಅಪಾಯಕಾರಿ ಸಂಗತಿಯಾಗಿದೆ" ಎಂದು ಹೇಳಿ ತನ್ನ ಮಾತು ಮುಂದುವರೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಫೇರ್, "ಪಾಕಿಸ್ತಾನ ಯಾವಾಗಲೂ ಅಪಾಯವನ್ನು ಸ್ವೀಕರಿಸುತ್ತದೆ. ಅವರು ಎಂದಿಗೂ ಅಪಾಯ-ವಿರೋಧಿಗಳಲ್ಲ. ಇದಕ್ಕೆ ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿ ಅಥವಾ 1990ರ ದಶಕದಲ್ಲಿ ತಾಲಿಬಾನಿಗಳಿಗೆ ಪಾಕ್ ಪ್ರೋತ್ಸಾಹ ನೀಡಿರುವುದೇ ಉದಾಹರಣೆ" ಎಂದು ತಿರುಗೇಟು ನೀಡಿದ್ದಾರೆ.
ಈ ವೇಳೆ ಕೋಪಗೊಂಡ ಸಂದರ್ಶಕಿ, "ಈ ಬಗ್ಗೆ ಮಾತನಾಡಲು ನಮ್ಮ ಬಳಿ ಯಾವುದೇ ರಾಜತಾಂತ್ರಿಕ ಅಧಿಕಾರಿ ಲಭ್ಯವಿಲ್ಲ" ಎಂದು ಹೇಳಿ ಸಂದರ್ಶನವನ್ನೇ ಅರ್ಧಕ್ಕೆ ನಿಲ್ಲಿಸಿದರು. ಸಂದರ್ಶನದ ಕೊನೆಯಲ್ಲಿ ಕ್ರಿಸ್ಟಿನ್ ಫೇರ್, "ಥ್ಯಾಂಕ್ ಗಾಡ್.. ನೀವು ಅವರನ್ನು (ಪಾಕಿಸ್ತಾನಿ ರಾಜತಾಂತ್ರಿಕರನ್ನು) ಹೊಂದಿಲ್ಲ. ಇಲ್ಲದಿದ್ದರೆ ಆತ ಕಪೋಲಕಲ್ಪಿತ ಕಥೆಗಳನ್ನು ಕಟ್ಟುತ್ತಿದ್ದ" ಎಂದು ವ್ಯಂಗ್ಯವಾಡಿದ್ದಾರೆ.
ಈ ಸಂದರ್ಶನದ ವಿಡಿಯೋ ತುಣುಕೊಂದನ್ನು ಪಶ್ಚಿಮ ಏಷ್ಯಾದ ರಾಜಕೀಯ ವಿಶ್ಲೇಷಕಿ ಮತ್ತು ಪತ್ರಕರ್ತೆ ಕೈಲ್ ಓರ್ಟನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.