ಲಂಡನ್: ದಿ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಹಾಗೂ ವಿಶ್ವ ಗುರು ಬಸವಣ್ಣ ಅವರ 885ನೇ ಜಯಂತಿಯನ್ನು ಆಚರಿಸಲಾಯಿತು.
ಇಂದು ಸಮಾನತಾವಾದಿ, ಕ್ರಾಂತಿಕಾರಿ ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು 'ತಾರತಮ್ಯ ವಿರೋಧಿ ದಿನ' (Anti- Discrimination day) ಎಂಬ ಹೆಸರಿನಿಂದ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಲ್ಯಾಂಬೆತ್‌ನಲ್ಲಿ ಸ್ಥಾಪಿಸಲಾದ ಬಸವೇಶ್ವರ ಮೂರ್ತಿ ಬಳಿ ನೂರಾರು ಅನಿವಾಸಿ ಭಾರತೀಯರು ಬಸವಣ್ಣ ಹಾಗೂ ಅಂಬೇಡ್ಕರ್ ಭಾವಚಿತ್ರ ಹಿಡಿದು, ಸಾಧಕರ ಸೇವೆಯನ್ನು ಸ್ಮರಿಸಿದರು.
ಈ ವೇಳೆ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಮಾತನಾಡಿ, ಜಾತಿ ತಾರತಮ್ಯ ಹಾಗೂ ಲಿಂಗ ಅಸಮಾನತೆಯ ವಿರುದ್ಧ ಹೋರಾಡಿದ ಈ ಇಬ್ಬರು ಸಾಧಕರಿಗೆ ಗೌರವಸಲ್ಲಿಸುವುದು ನಮಗೆ ಹೆಮ್ಮೆಯ ಸಂಗತಿ. ವಿಶ್ವಕ್ಕೆ ಅವರು ನೀಡಿದ್ದ ಕೊಡುಗೆ ಅನನ್ಯ ಎಂದು ಸ್ಮರಿಸಿದರು.
ಬಸವೇಶ್ವರ ಅವರು 12ನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯ ಆಸೆಯಗಳನ್ನು ಆರಂಭಿಸಿದ್ದರು. ನವ ಭಾರತದಲ್ಲಿ ಅಂಬೇಡ್ಕರ್ ಅವರು ಬಸವಣ್ಣ ಪ್ರತಿಪಾದಿಸಿದ ಪ್ರಜಾಪ್ರಭುತ್ವದ ಆಸೆಯಗಳನ್ನು ಸಂವಿಧಾನ ರಚಿಸುವ ಮೂಲಕ ಸಾಕಾರಗೊಳಿಸಿದ್ದರು. ಈ ಇಬ್ಬರೂ ವಾಕ್ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಚಾಂಪಿನ್ಗಳು. ಭಾರತೀಯ ಸಮುದಾಯದಲ್ಲಿನ ಜಾತಿ ತಾರತಾಮ್ಯ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡುತ್ತೇವೆ ಎಂದು ಪಾಟೀಲ್ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಿಟನ್‌ನಲ್ಲಿರುವ ಭಾರತದ ಹೈಕಮೀಷನರ್ ರುಚಿ ಘನಶ್ಯಾಮ್, ಉಪ ಆಯುಕ್ತ ಚರಣಜೀತ್ ಸಿಂಗ್ ಭಾಗವಹಿಸಿ ಗೌರವ ಸಲ್ಲಿಸಿದ್ದರು.