ಜಿನೀವಾ: ಭಾರತದಲ್ಲಿ ಮೊದಲು ಪತ್ತೆಯಾದ ಬಿ.1.617 ಕೋವಿಡ್-19 ರೂಪಾಂತರ ಈಗ 53 ದೇಶಗಳಲ್ಲಿ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಹೇಳಿದೆ.
ಮೇ 25ರಂದು ಡಬ್ಲ್ಯುಹೆಚ್‌ಒ ಪ್ರಕಟಿಸಿದ ಕೋವಿಡ್-19 ವಾರದ ವರದಿಯಲ್ಲಿ, ಕಳೆದೊಂದು ವಾರದಿಂದ ಜಾಗತಿಕವಾಗಿ ಹೊಸ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. 4.1 ದಶಲಕ್ಷಕ್ಕೂ ಹೆಚ್ಚು ಹೊಸ ಕೇಸ್ ಮತ್ತು 84,000 ಹೊಸ ಸಾವುಗಳು ವರದಿಯಾಗಿದ್ದು, ಈ ಪ್ರಮಾಣ ಹಿಂದಿನ ವಾರಕ್ಕಿಂತ ಶೇ. 2ರಷ್ಟು ಕಡಿಮೆಯಿದೆ ಎಂದು ಮಾಹಿತಿ ನೀಡಿದೆ.
ಭಾರತದಲ್ಲಿ ಕಳೆದೊಂದು ವಾರದಲ್ಲಿ ಹೊಸ ಸೋಂಕಿತರ ಸಂಖ್ಯೆಯಲ್ಲಿ ಶೇ. 23ರಷ್ಟು ಇಳಿಕೆಯಾಗಿದೆಯಾದರೂ, ವಿಶ್ವದಲ್ಲೇ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲಿ ಮೊದಲು ಪತ್ತೆಯಾದ ಬಿ.1.617 ಕೊರೊನಾ ವೈರಸ್ ರೂಪಾಂತರವು ಇದೀಗ ಪ್ರಪಂಚದ 53 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಇದೊಂದು ಭೀಕರ ರೂಪಾಂತರವಾಗಿದ್ದು, ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿದೆ. ಇದರ ತೀವ್ರತೆ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದು ಡಬ್ಲ್ಯುಹೆಚ್‌ಒ ತಿಳಿಸಿದೆ.