ಜಿನೀವಾ :ಕಳೆದ ಕೆಲ ದಿನಗಳಿಂದ ಉಕ್ರೇನ್ ವಿರುದ್ಧ ನಡೆಯುತ್ತಿರುವ ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ 102 ನಾಗರಿಕರು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಅಧ್ಯಕ್ಷ ಮಿಚೆಲ್ ಬ್ಯಾಚೆಲೆಟ್ ಮಾಹಿತಿ ನೀಡಿದ್ದು, ಇದರಲ್ಲಿ ಏಳು ಮಕ್ಕಳು ಸಹ ಸೇರಿಕೊಂಡಿವೆ ಎಂದು ತಿಳಿಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಮಾಡುತ್ತಿದ್ದಂತೆ ಕೀವ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ವೈಮಾನಿಕ ದಾಳಿ ನಡೆಯುತ್ತಿದ್ದು, ಪರಿಣಾಮ 5 ಲಕ್ಷ ಜನರು ನಿರಾಶ್ರಿತರಾಗಿ ಈಗಾಗಲೇ ಉಕ್ರೇನ್ನಿಂದ ನೆರೆಯ ರಾಷ್ಟ್ರಗಳಿಗೆ ಪಲಾಯನ ಮಾಡಿದ್ದಾರೆಂಬ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ 304 ಜನರು ಗಾಯಗೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ.