ಕೀವ್:ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಇಂದಿಗೆ 27 ದಿನಗಳು ಕಳೆದಿವೆ. ಆದರೂ ಪುಟ್ಟ ರಾಷ್ಟ್ರ ಪುಟಿನ್ ಸೇನೆಯನ್ನು ದಿಟ್ಟವಾಗಿಯೇ ಎದುರಿಸುತ್ತಿದೆ. ದಾಳಿಯ ನಡುವೆಯೂ ನಡೆದ ಮಾತುಕತೆಗಳು ವಿಫಲವಾಗುತ್ತಿದ್ದಂತೆ ರಷ್ಯಾ ಪಡೆಗಳ ಆಕ್ರಮಣಕಾರಿ ಕಾರ್ಯಾಚರಣೆಗಳು ಮತ್ತಷ್ಟು ಹೆಚ್ಚಿವೆ. ಅಮೆರಿಕ, ಫ್ರಾನ್ಸ್, ಬ್ರಿಟನ್ ಸೇರಿದಂತೆ ಹಲವು ದೇಶಗಳು ಉಕ್ರೇನ್‌ಗೆ ಬೆಂಬಲ ನೀಡತ್ತಲೇ ಬಂದಿದೆ.
ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ರಷ್ಯಾದೊಂದಿಗೆ ಶಾಂತಿ ಮಾತುಕತೆಯಲ್ಲಿ ಒಪ್ಪಿಗೆಯಾಗುವ ಯಾವುದೇ ಒಪ್ಪಂದವನ್ನು ಉಕ್ರೇನ್‌ನಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಾದೇಶಿಕ ಉಕ್ರೇನಿಯನ್ ಸಾರ್ವಜನಿಕ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಝೆಲೆನ್‌ಸ್ಕಿ, ನಾನು ಎಲ್ಲ ಸಮಾಲೋಚನಾ ಗುಂಪುಗಳಿಗೆ ವಿವರಿಸಿದ್ದೇನೆ. ನೀವು ಈ ಎಲ್ಲ ಬದಲಾವಣೆಗಳ ಬಗ್ಗೆ (ಭವಿಷ್ಯದ ಒಪ್ಪಂದಗಳು) ಮಾತನಾಡುವಾಗ ಅವು ಐತಿಹಾಸಿಕವಾಗಬಹುದು. ಹೀಗಾಗಿ ಅಂತಿಮವಾಗಿ ನಾವು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.
ಜನರು ಕೆಲವು ವಿಧದ ರಾಜಿಗಳು, ಹೊಂದಾಣಿಕೆಗಳು ಹಾಗೂ ರಷ್ಯಾ ಜೊತೆಗಿನ ಮಾತುಕತೆಗಳ ಭಾಗವಾಗಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಿಳಿಸಿದ್ದಾರೆ. ಉಕ್ರೇನ್ ಎಂದಿಗೂ ನ್ಯಾಟೋಗೆ ಸೇರಬಾರದು ಎಂಬ ಪ್ರಮುಖ ಪ್ರಶ್ನೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಝೆಲೆನ್‌ಸ್ಕಿ, ನಾವೆಲ್ಲರೂ ಇದನ್ನು ಈಗಾಗಲೇ ಅರ್ಥಮಾಡಿಕೊಂಡಿದ್ದೇವೆ. ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸೋದಿಲ್ಲ. ಏಕೆಂದರೆ ಅದರ ಸದಸ್ಯ ರಾಷ್ಟ್ರಗಳು ರಷ್ಯಾಗೆ ಹೆದರುತ್ತವೆ ಎಂದಿದ್ದಾರೆ.
ಇದನ್ನೂ ಓದಿ:ನ್ಯಾಟೋಗೆ ನಮ್ಮನ್ನ ಸೇರಿಸಿಕೊಳ್ತೀರಾ ಇಲ್ವಾ ಅನ್ನೋದನ್ನ ಹೇಳ್ಬಿಡಿ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ