ಕೀವ್(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ಬಹುತೇಕ ಎಲ್ಲ ನಗರಗಳು ಧ್ವಂಸಗೊಂಡಿದ್ದು, ಸಾವಿರಾರು ಜನರು, ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧ ಪ್ರಾರಂಭವಾಗಿ 14 ದಿನಗಳು ಕಳೆಯುತ್ತಾ ಬಂದರೂ, ಎರಡು ದೇಶಗಳು ಮಹತ್ವದ ಒಪ್ಪಂದಕ್ಕೆ ಬಂದಿಲ್ಲ. ಇದರ ಮಧ್ಯೆ ಉಕ್ರೇನ್ ಅಧ್ಯಕ್ಷರ ಪತ್ನಿ ಒಲೆನಾ ಮಾಧ್ಯಮಗಳಿಗೆ ಭಾವನಾತ್ಮಕವಾಗಿ ಮುಕ್ತ ಪತ್ರ ಬರೆದಿದ್ದಾರೆ.
'ಪುಟಿನ್ ಅವರನ್ನ ನಿಲ್ಲಿಸದಿದ್ದರೆ, ಯಾವುದೇ ಸ್ಥಳ ಸುರಕ್ಷಿತವಲ್ಲ' ಎಂದು ಬಹಿರಂಗ ಪತ್ರದಲ್ಲಿ ಎಚ್ಚರಿಸಿದ್ದಾರೆ. ಜೊತೆಗೆ ಉಕ್ರೇನಿಯನ್ ನಾಗರಿಕರ ಸಾಮೂಹಿಕ ಹತ್ಯೆಗೋಸ್ಕರ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರನ್ನ ಖಂಡಿಸಿದ್ದಾರೆ. ಮುಂದೊಂದು ದಿನ ನಿಮ್ಮ ನಗರಕ್ಕೂ ರಷ್ಯಾ ಪ್ರವೇಶ ಮಾಡಬಹುದು. ಈಗಲೇ ಅದನ್ನ ತಡೆದು ನಿಲ್ಲಿಸುವ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಫೆ. 24ರಂದು ರಷ್ಯಾದ ಮಿಲಿಟರಿ ಕಾರ್ಯಾಚರಣೆ ಘೋಷಣೆಯಿಂದ ನಾವೆಲ್ಲರೂ ಎಚ್ಚೆತ್ತುಗೊಂಡಿದ್ದೇವೆ. ಯುದ್ಧ ವಿಮಾನ, ಕ್ಷಿಪಣಿ ನಮ್ಮ ನಗರಗಳನ್ನ ಸುತ್ತುವರೆದಿವೆ. ಈಗಾಗಲೇ ಅನೇಕ ನಾಗರಿಕರ ಸಾಮೂಹಿಕ ಹತ್ಯೆಯಾಗಿದ್ದು, ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿವೆ. ಉಕ್ರೇನ್ ಶಾಂತಿ ಬಯಸುತ್ತದೆ. ತನ್ನ ಗಡಿ ರಕ್ಷಣೆ ಮಾಡಿಕೊಳ್ಳಲು ಬದ್ಧವಾಗಿದೆ ಎಂದಿದ್ದಾರೆ.