ಸೌತಾಂಪ್ಟನ್ (ಇಂಗ್ಲೆಂಡ್): ಕೊರೊನಾ ಅಬ್ಬರದ ಮಧ್ಯೆಯೇ ವಿಂಡೀಸ್ ತಂಡ ಇಂಗ್ಲೆಂಡ್ಗೆ ಪ್ರವಾಸ ಬೆಳೆಸುವುದರ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಗೊಂಡಿದೆ. ಇನ್ನು ಮೊದಲ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಮಣಿಸಿ ಭರ್ಜರಿ ಜಯ ಗಳಿಸಿದೆ. ಗೆಲುವಿನ ಕುರಿತು ತಂಡದ ನಾಯಕ ಜೇಸನ್ ಹೋಲ್ಡರ್ ಮಾತನಾಡಿದ್ದಾರೆ.
ಇದು ಭರ್ಜರಿ ಜಯ, ಇಂಗ್ಲೆಂಡ್ ನೆಲದಲ್ಲಿ ಆಡುವುದು ಸುಲಭವಲ್ಲ. ಈ ಹಿಂದೆ 2017ರಲ್ಲಿ ಹೆಡಿಂಗ್ಲೆಯಲ್ಲಿ ನಾವು ಗೆದ್ದಿದ್ದೆವು. ಆದರೆ ಅಂದಿನಿಂದ ಇಲ್ಲಿಯವರಗೆ ಅನೇಕ ವಿಷಯಗಳು ಬದಲಾಗಿವೆ. ನಾವು ಆಡಿದ ರೀತಿ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಹೋಲ್ಡರ್ ಹೇಳಿದರು.
ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಶ್ಯಾನ್ನೋನ್ ಗ್ಯಾಬ್ರಿಲ್ ಕುರಿತು ಮಾತನಾಡಿ, ಆತ ಆಡಿರುವ ಆಟದಲ್ಲಿ ಆಶ್ಚರ್ಯ ಪಡಬೇಕಾದ ವಿಷಯವಿಲ್ಲ. ಏಕೆಂದರೆ ನನಗೆ ಗೊತ್ತಿದೆ ಆತ ಉತ್ತಮ ಆಟಗಾರರಲ್ಲಿ ಓರ್ವ. ಆತ ಹೃದಯವಂತ ಎಂದು ಹೇಳಿದ್ದಾರೆ.
13 ವರ್ಷಗಳ ಬಳಿಕ ಮೊದಲ ಬಾರಿಗೆ ವಿಂಡೀಸ್ ಸಾಗರೋತ್ತರ ಸರಣಿಯ ಆರಂಭಿಕ ಟೆಸ್ಟ್ನಲ್ಲಿ ಗೆದ್ದಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೋಲ್ಡರ್, "ನಾವು ಆಡುವ ಪ್ರತಿಯೊಂದು ಆಟವನ್ನು ಗೆಲ್ಲಲು ಬಯಸುತ್ತೇವೆ. ಆದರೆ, ಅದು ಆಗಾಗ ಸಾಧ್ಯವಾಗುವುದಿಲ್ಲ. ಮೈದಾನದಲ್ಲಿ ಹೆಜ್ಜೆ ಹಾಕುವಾಗ ಪ್ರತಿಯೊಂದು ಟೆಸ್ಟ್ ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ನಾವು ಈ ಸರಣಿಯನ್ನು ಚೆನ್ನಾಗಿ ಪ್ರಾರಂಭಿಸಿದ್ದೆವು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.