ಕಾಬೂಲ್: ಬಾಗ್ಲಾನ್ ಮತ್ತು ನಿಮ್ರೋಜ್ ಪ್ರಾಂತ್ಯಗಳಲ್ಲಿ ಭಾನುವಾರ ನಡೆದ ಪ್ರತ್ಯೇಕ ತಾಲಿಬಾನ್ ದಾಳಿಯಲ್ಲಿ ಭದ್ರತಾ ಪಡೆಯ ಆರು ಜನ ಸೈನಿಕರು ಮೃತಪಟ್ಟರೆ ಒಟ್ಟು 12 ಸೈನಿಕರು ಗಾಯಗೊಂಡ ಘಟನೆ ನಡೆದಿದೆ.
ಕಳೆದ ರಾತ್ರಿ ಭದ್ರತಾ ಪಡೆಗಳು ಕುಂಡುಜ್‌ನಿಂದ ಕಾಬೂಲ್‌ಗೆ ತೆರಳುತ್ತಿದ್ದಾಗ ಬಾಗ್ಲಾನ್-ಎ-ಮಾರ್ಕ್‌ಜೈ ಜಿಲ್ಲೆಯ ಬಾಗ್ಲಾನ್-ಕುಂಡುಜ್ ಹೆದ್ದಾರಿಯಲ್ಲಿ ಈ ದಾಳಿ ನಡೆದಿದೆ ಎಂದು ಅಧಿಮಾರಿಗಳು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರಾಂತ್ಯದ ಬಾಗ್ಲಾನ್‌ನಲ್ಲಿ ಭದ್ರತಾ ಪಡೆಗಳ ಬೆಂಗಾವಲು ಮೇಲೆ ತಾಲಿಬಾನ್ ದಾಳಿ ನಡೆಸಿದ್ದು, ಇದರಲ್ಲಿ ಮೂವರು ಸೈನಿಕರು ಮೃಪಪಟ್ಟಿದ್ದಾರೆ. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಕೆಲವು ಸೇನಾ ವಾಹನಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ನಿಮ್ರೋಜ್ ಪ್ರಾಂತ್ಯದ ಚಖನ್‌ಸೂರ್ ಜಿಲ್ಲೆಯ ಭದ್ರತಾ ಸಿಬ್ಬಂದಿ ಮೇಲೆಯೂ ತಾಲಿಬಾನ್ ಕೃತ್ಯ ನಡೆಸಿದ್ದು, ಅಲ್ಲಿ ಮೂವರು ಪೊಲೀಸರು ಹತರಾಗಿದ್ದರೆ ಆರು ಜನ ಗಾಯಗೊಂಡಿದ್ದಾರೆ. ಬಾಗ್ಲಾನ್ ದಾಳಿಯ ಜವಾಬ್ದಾರಿಯನ್ನು ತಾಲಿಬಾನ್ ವಹಿಸಿಕೊಂಡಿದೆ. ಆದರೆ, ನಿಮ್ರೋಜ್ ದಾಳಿಯ ಬಗ್ಗೆ ಇದುವರೆಗೂ ಯಾವುದೇ ಸಂಘಟನೆ ಪ್ರತಿಕ್ರಿಯೆ ನೀಡಿಲ್ಲ.