ಲಂಡನ್: ಇಲ್ಲಿನ ಈಶಾನ್ಯ ಸ್ಕಾಟ್ಲೆಂಡ್ನಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಪ್ರಯಾಣಿಕರು ಸಂಚರಿಸುತ್ತಿದ್ದ ರೈಲು (ಪ್ಯಾಸೆಂಜರ್ ರೈಲು) ಹಳಿ ತಪ್ಪಿದ ಪರಿಣಾಮ ಮೂವರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಬ್ರಿಟಿಷ್ ಪೊಲೀಸರು ಮಾಹಿತಿ ನೀಡಿದ್ದಾರೆ.
ರೈಲಿನಲ್ಲಿ ಎಷ್ಟು ಜನರು ಇದ್ದರು ಎಂಬುದು ಸ್ಪಷ್ಟವಾಗಿಲ್ಲ. ಮೃತರಲ್ಲಿ ರೈಲು ಚಾಲಕ ಮತ್ತು ನಿರ್ವಾಹಕನೂ ಸೇರಿರುವ ಸಾಧ್ಯತೆ ಇದೆ. ಔಪಚಾರಿಕವಾಗಿ ಮೃತರನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ ಎಂದು ಅಲ್ಲಿನ ಸಾರಿಗೆ ಇಲಾಖೆ ತಿಳಿಸಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಳಿ ತಪ್ಪಿದ ಪರಿಣಾಮ ಬೋಗಿಗಳು ಕಂದಕಕ್ಕೆ ಬಿದ್ದಿದ್ದು, ಎಂಜಿನ್ ಇದ್ದ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಸ್ಥಳೀಯರಿಂದ ವಿಷಯ ಗೊತ್ತಾಗುತ್ತಿದ್ದಂತೆ ರಕ್ಷಣಾ ಕಾರ್ಯಪಡೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಏರ್ ಆ್ಯಂಬುಲೆನ್ಸ್‌ಗಳು ಮತ್ತು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್‌ಗಳ ಮೂಲಕ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಬೆಂಕಿ ಕಾಣಿಸಿಕೊಂಡ ನಂತರ ದಟ್ಟವಾಗಿ ಹೊಗೆ ಆವರಿಸಿರುವುದು ಬೆಂಕಿ ಕಾಣಿಸಿಕೊಂಡ ಪರಿಣಾಮ ಬೋಗಿ ಸುಟ್ಟು ಕರಕಲಾಗಿದೆ. ಹಳಿ ತಪ್ಪಲು ಕಾರಣವೇನು ಎಂಬುದನ್ನು ಕಂಡು ಹಿಡಿಯುವುದು ಮತ್ತು ಮತ್ತೊಮ್ಮೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು. ಬಹಳ ಕಡಿಮೆ ಅವಧಿಯಲ್ಲೇ ಮಳೆ ಸುರಿದಿದೆ. ನಿಸ್ಸಂದೇಹವಾಗಿ ಅಲ್ಲಿ ಸಮಸ್ಯೆ ಉಲ್ಬಣಿಸಲು ಕಾರಣ ಇರಬಹುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಸ್ಕಾಟ್ಲೆಂಡ್ನಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಪ್ರಯಾಣಕ್ಕೆ ಅಡೆತಡೆಗಳು ಉಂಟಾಗಿವೆ. ಮತ್ತು ಬುಧವಾರ ಬೆಳಗ್ಗೆ ಈ ಪ್ರದೇಶದಲ್ಲಿ ಭೂಕುಸಿತವೂ ಉಂಟಾಗಿತ್ತು. ಹೀಗಾಗಿ ದುರ್ಘಟನೆ ಸಂಭವಿಸಿದೆ.