ಪ್ಯಾರಿಸ್ (ಫ್ರಾನ್ಸ್): ಕ್ಯಾಲೈಸ್ ಕರಾವಳಿಯ ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಬೋಟ್ ಮುಳುಗಿ ಕನಿಷ್ಠ 27 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡಾರ್ಮಾನಿನ್ ಮಾಹಿತಿ ನೀಡಿದ್ದಾರೆ.
ಫ್ರಾನ್ಸ್ ಮತ್ತು ಯುಕೆ ನಡುವೆ ವಲಸಿಗರನ್ನು ಹೊತ್ತು ಸಾಗುತ್ತಿದ್ದ ಈ ಬೋಟ್ನಲ್ಲಿ 34 ಮಂದಿ ಇದ್ದರು. ಓರ್ವ ಪುಟ್ಟ ಬಾಲಕಿ, ಐವರು ಮಹಿಳೆಯರು ಸೇರಿ 27 ಮಂದಿಯ ಮೃತದೇಹ ಸಿಕ್ಕಿದ್ದು ಇಬ್ಬರನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಮೃತರು ಯಾವ ದೇಶದವರೆಂದು ಪತ್ತೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಬ್ಬರೂ ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಇಂಗ್ಲಿಷ್ ಕಡಲ್ಗಾಲುವೆಯನ್ನು ಸ್ಮಶಾನವನ್ನಾಗಿಸಲು ನನ್ನ ದೇಶ ಬಿಡುವುದಿಲ್ಲ ಎಂದ ಮ್ಯಾಕ್ರನ್, ಭವಿಷ್ಯದ ದುರಂತಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲು ಯುರೋಪಿಯನ್ ನಾಯಕರನ್ನು ಒತ್ತಾಯಿಸಿದ್ದಾರೆ.