ಸ್ಟಾಕ್ಹೋಮ್:2021ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿದ್ದು, ಜಂಟಿಯಾಗಿ ಮೂವರು ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಡೇವಿಡ್ ಕಾರ್ಡ್, ಜೋಶುವಾ ಡಿ ಆಂಗ್ರಿಸ್ಟ್ ಹಾಗೂ ಗೈಡೋ ಡಬ್ಲೂ ಇಂಬೆನ್ಸ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಡೇವಿಡ್ ಕಾರ್ಡ್ ಅವರಿಗೆ ಅರ್ಧದಷ್ಟು ಹಣ ನೀಡಲು ನೊಬೆಲ್ ಸಮಿತಿ ನಿರ್ಧಾರ ಮಾಡಿದ್ದು, ಉಳಿದ ಹಣ ಜೋಶುವಾ ಡಿ ಆಂಗ್ರಿಸ್ಟ್ ಹಾಗೂ ಗೈಡೋ ಡಬ್ಲೂ ಅವರಿಗೆ ನೀಡಲು ಮುಂದಾಗಿದೆ. ಕಾರ್ಮಿಕ ಮಾರುಕಟ್ಟೆಯ ಬಗ್ಗೆ ಹೊಸ ಒಳನೋಟ ಹಾಗೂ ನೈಸರ್ಗಿಕ ಪ್ರಯೋಗಗಳ ಬಗ್ಗೆ ಸಂಶೋಧನೆ ಕೈಗೊಂಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿ ತಿಳಿಸಿದೆ.
ಅಲ್ಫ್ರೆಡ್ ನೊಬೆಲ್ ಅವರ ಸ್ಮರಣಾರ್ತವಾಗಿ 1969ರಿಂದ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಕಳೆದ ವರ್ಷ ರಾಬರ್ಟ್ಸ್ ವಿಲ್ಸನ್ ಹಾಗೂ ಪೌಲ್ ಮಿಲ್ಗ್ರಾಮ್ ಅವರು ಈ ಗೌರವಕ್ಕೆ ಭಾಜನರಾಗಿದ್ದರು. ಹರಾಜು ಸಿದ್ಧಾತಂದ ಸುಧಾರಣೆ ಹಾಗೂ ಹೊಸ ಹರಾಜು ಸ್ವರೂಪಗಳ ಆವಿಷ್ಕಾರಕ್ಕಾಗಿ ಪುರಸ್ಕಾರ ನೀಡಲಾಗಿತ್ತು. ಇದುವರೆಗೂ 52 ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಈಗಾಗಲೇ ಶಾಂತಿ, ಸಾಹಿತ್ಯ ಕ್ಷೇತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಮೆಡಿಸಿನ್ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪ್ರಕಟಗೊಂಡಿವೆ. ಪ್ರಶಸ್ತಿಯ ಒಟ್ಟು ಮೌಲ್ಯ 10 ಮಿಲಿಯನ್ ಸ್ವೀಡಿಷ್ ಕ್ರೋನ್ (121.12 ಮಿಲಿಯನ್) ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸುಮಾರು 8 ಕೋಟಿ ರೂ. ಆಗಿರುತ್ತದೆ. (8,52,19,020 ರೂ. )