ಕೀವ್(ಉಕ್ರೇನ್): ರಷ್ಯಾ ಉಕ್ರೇನ್ ಯುದ್ಧ ಮುಂದುವರಿದಿದೆ. ಯುದ್ಧದಲ್ಲಿ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ಆಹಾರ, ನೀರು, ಮೂಲ ಸೌಕರ್ಯಗಳಿಲ್ಲದೇ ನರಳಾಡುವ ಪರಿಸ್ಥಿತಿ ಮುಂದುವರಿದಿದೆ. ಅನೇಕರು ಎಲ್ಲವನ್ನೂ ತೊರೆದು ದೇಶದಿಂದ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಇಷ್ಟೆಲ್ಲ ಆದರೂ ರಷ್ಯಾ ಮಾತ್ರ ಉಕ್ರೇನ್ನ ಮೇಲೆ ಯುದ್ಧ ಮುಂದುವರಿಸಿದೆ.
ಉಕ್ರೇನಿಯನ್ ಬಂದರುಗಳ ಮೇಲೆ ರಷ್ಯಾ ಪಡೆಗಳು ಮುತ್ತಿಗೆ ಹಾಕಿವೆ. ಮುತ್ತಿಗೆ ಹಾಕಿದ ಉಕ್ರೇನಿಯನ್ ಬಂದರು ಪ್ರದೇಶಗಳಿಂದ ಜನರ ಸ್ಥಳಾಂತರ ಮಾಡಲಾಗುತ್ತಿದೆ. ಮಂಗಳವಾರದಂದು ಅಂದಾಜು 20,000 ನಾಗರಿಕರು ಮಾನವೀಯ ಕಾರಿಡಾರ್ ಮೂಲಕ ಮರಿಯುಪೋಲ್‌ನಿಂದ ಸ್ಥಳಾಂತರಗೊಂಡಿದ್ದಾರೆ. ಆದರೆ, ರಷ್ಯಾದ ಪಡೆಗಳು ಕೀವ್ನಲ್ಲಿ ತಮ್ಮ ಬಾಂಬ್ ದಾಳಿಯನ್ನು ಹೆಚ್ಚಿಸಿವೆ. ಅಪಾರ್ಟ್‌ಮೆಂಟ್‌ಗಳು, ಸುರಂಗಮಾರ್ಗ, ನಾಗರಿಕ ತಾಣಗಳು, ಬಹುಮಹಡಿ ಕಟ್ಟಡಗಳು ಸೇರಿದಂತೆ ಹೆಚ್ಚಿನ ಮೂಲ ಸೌಕರ್ಯಗಳನ್ನು ರಷ್ಯಾ ಪಡೆ ಧ್ವಂಸಗೊಳಿಸಿವೆ.
ಉನ್ನತ ಉಕ್ರೇನಿಯನ್ ಸಮಾಲೋಚಕ, ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್, ರಷ್ಯನ್ನರೊಂದಿಗಿನ ಇತ್ತೀಚಿನ ಮಾತುಕತೆಗಳನ್ನು ಬಹಳ ಕಷ್ಟಕರ ಮತ್ತು ಜಿಗುಟಾದ ಮಾತುಕತೆ ಎಂದು ವಿವರಿಸಿದ್ದಾರೆ. ಉಭಯ ದೇಶಗಳ ನಡುವೆ ವಿರೋಧಾಭಾಸಗಳಿವೆ. ಆದರೆ, ರಾಜಿ ಮಾಡಿಕೊಳ್ಳಲು ಖಂಡಿತವಾಗಿಯೂ ಅವಕಾಶವಿದೆ ಎಂದು ಹೇಳಿದರು. ಬುಧವಾರ(ಇಂದು) ಮಾತುಕತೆ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.