ವುಹಾನ್(ಚೀನಾ): ಕೊರೊನಾ ವೈರಸ್ನ ಕೇಂದ್ರ ಬಿಂದು ಎಂದು ಕರೆಯಲ್ಪಡುವ ಚೀನಾದ ವುಹಾನ್ನಲ್ಲಿ ಪ್ರಸ್ತುತ 12 ಮಂದಿ ಮಾತ್ರ ಸೋಂಕಿತರಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಚೀನಾದ ಹುಬೈ ಪ್ರಾಂತ್ಯ ವುಹಾನ್ನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಕಾಣಿಸಿಕೊಂಡಿದ್ದ ಮಾರಣಾಂತಿಕ ಸೋಂಕು ಇಂದು ಇಡೀ ವಿಶ್ವವನ್ನೇ ಬಾಧಿಸುತ್ತಿದೆ. ಈ ಸಾಂಕ್ರಾಮಿಕವನ್ನು ತಡೆಯುವ ಉದ್ದೇಶದಿಂದ ಇಡೀ ಪ್ರಪಂಚವೇ ಲಾಕ್ಡೌನ್ ಘೋಷಣೆ ಮಾಡಿದೆ. ಇಂಥ ವೈರಸ್ ಕಾಣಿಸಿಕೊಂಡಿದ್ದ ವುಹಾನ್ ಸದ್ಯ ಸೋಂಕಿನಿಂದ ಮುಕ್ತವಾಗುವತ್ತ ಸಾಗಿದೆ.
ಶನಿವಾರ 11 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಪ್ರಸ್ತುತ 12 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶುಕ್ರವಾರದಿಂದ ಯಾವುದೇ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ. ಇಡೀ ಚೀನಾದಲ್ಲಿ 51 ಸೋಂಕಿತರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಕಳೆದ ಡಿಸೆಂಬರ್ನಿಂದ ಇಲ್ಲಿಯವರೆಗೆ 82,827 ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 4,632 ಜನ ಸಾವಿಗೀಡಾಗಿದ್ದಾರೆ. ಒಟ್ಟು 77,394 ಜನರು ಗುಣಮುಖರಾಗಿದ್ದು, ಪ್ರಸ್ತುತ 801 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.