ಏ.23 ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಓದುವಿಕೆಯ ಅಭಿರುಚಿ ಹೆಚ್ಚಿಸಲು, ಪ್ರಕಾಶನಕ್ಕೆ ಉತ್ತೇಜನ ನೀಡಲು ಹಾಗೂ ಕೃತಿಸ್ವಾಮ್ಯಗಳ ಸಂರಕ್ಷಣೆಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಜಗತ್ತಿನ ಖ್ಯಾತ ಲೇಖಕರಲ್ಲಿ ಕೆಲವರಾದ ವಿಲಿಯಂ ಶೇಕ್ಸಪೀಯರ್, ಮಿಗ್ವೆಲ್ ಸರ್ವಾಂಟೆಸ್ ಹಾಗೂ ಇಂಕಾ ಗಾರ್ಸಿಲಾಸೊ ಡೆ ಲಾ ವೆಗಾ ಇವರೆಲ್ಲ ತೀರಿಕೊಂಡ ದಿನವಾದ ಏ.23 ರಂದೇ ವಿಶ್ವ ಪುಸ್ತಕ ದಿನ ಆಚರಿಸುವುದು ಸೋಜಿಗದ ವಿಷಯ.
ಯುನೆಸ್ಕೊ ವತಿಯಿಂದ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, 1995 ರ ಏ.23 ರಂದು ಇದನ್ನು ಆರಂಭಿಸಲಾಯಿತು. ಪುಸ್ತಕ ದಿನಾಚರಣೆ ಅಂಗವಾಗಿ ಪ್ರತಿವರ್ಷ ವಿಶ್ವದ ಒಂದು ನಗರವನ್ನು ವಿಶ್ವದ ಪುಸ್ತಕ ರಾಜಧಾನಿಯನ್ನಾಗಿ ಯುನೆಸ್ಕೊ ಘೋಷಿಸುತ್ತದೆ. ಈ ಬಾರಿ ಮಲೇಶಿಯಾ ರಾಜಧಾನಿ ಕೌಲಾಲಂಪುರ್ ವಿಶ್ವದ ಪುಸ್ತಕ ರಾಜಧಾನಿ ಪಟ್ಟದ ಗೌರವ ಪಡೆದುಕೊಂಡಿದೆ.
ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಉದ್ದೇಶಗಳು
ವಿಶ್ವ ಪುಸ್ತಕ ದಿನದಂದು ಪುಸ್ತಕ ಹಾಗೂ ಲೇಖಕ ಇಬ್ಬರಿಗೂ ಗೌರವ ಸಲ್ಲಿಸಲಾಗುತ್ತದೆ. ಜೊತೆಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಓದುವಿಕೆಯ ಮಾಧುರ್ಯವನ್ನು ತಿಳಿಸುವ ವಿವಿಧ ಚಟುವಟಿಕೆಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಪುಸ್ತಕ ಹಾಗೂ ಲೇಖಕರ ಕೊಡುಗೆಯನ್ನು ಜಗತ್ತಿಗೆ ತಿಳಿಸಲು ಈ ದಿನಾಚರಣೆ ಸಹಕಾರಿಯಾಗಿದೆ. ಯುನೆಸ್ಕೊ ನೀಡುವ ಸಹಿಷ್ಣುತೆಯ ಸೇವೆಯಲ್ಲಿ ಮಕ್ಕಳ ಮತ್ತು ಯುವಜನರ ಸಾಹಿತ್ಯ ಪುರಸ್ಕಾರವನ್ನು ಈ ದಿನದಂದು ಪ್ರಕಟಿಸಲಾಗುತ್ತದೆ.
1995 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಏ.23 ರಂದು ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ ಆಚರಿಸಲು ನಿರ್ಧರಿಸಲಾಯಿತು. ಅಲ್ಲಿಗೆ ಈ ಬಾರಿ ನಾವು 25 ನೇ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಆಚರಿಸುತ್ತಿದ್ದೇವೆ.
ಕೃತಿಸ್ವಾಮ್ಯ ಎಂದರೇನು?
ಲೇಖಕ ಅಥವಾ ಬರಹಗಾರರಿಗೆ ಅವರು ರಚಿಸಿದ ಬರಹ ಅಥವಾ ಇನ್ನಾವುದೇ ಮಾಹಿತಿಯ ಮೇಲೆ ಕಾನೂನಾತ್ಮಕ ಹಕ್ಕು ನೀಡುವುದೇ ಕೃತಿಸ್ವಾಮ್ಯವಾಗಿದೆ. ತನ್ನ ಕೃತಿಯನ್ನು ಪ್ರಕಟಿಸಲು ಅಥವಾ ನಕಲು ಮಾಡಲು ಮತ್ತೊಬ್ಬರಿಗೆ ಅಧಿಕಾರ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಅಂದರೆ ಮೂಲತಃ ಇದು ಬೌದ್ಧಿಕ ಆಸ್ತಿ ಹಕ್ಕಾಗಿದೆ.
ಪುಸ್ತಕ ಹಾಗೂ ಕೃತಿಸ್ವಾಮ್ಯಗಳ ರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡುತ್ತಿರುವ ಯುನೆಸ್ಕೊ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ವೈವಿಧ್ಯತೆಗಳಿಗೆ ಒತ್ತು ನೀಡುತ್ತಿದೆ. ಹಾಗೆಯೇ ಎಲ್ಲರಿಗೂ ಜ್ಞಾನದ ಸಮಾನ ಹಂಚಿಕೆಯಾಗುವಂತೆ ಶ್ರಮಿಸುತ್ತಿದೆ. ಸೃಜನಾತ್ಮಕ ನಗರಗಳ ಜಾಲ ನಿರ್ಮಾಣ, ಸಾಕ್ಷರತೆಯ ಉತ್ತೇಜನ, ಮೊಬೈಲ್ ಮೂಲಕ ಕಲಿಕೆ ಮತ್ತು ವೈಜ್ಞಾನಿಕ ಹಾಗೂ ಶೈಕ್ಷಣಿಕ ಜ್ಞಾನ ಸಂಪನ್ಮೂಲಗಳು ಮುಕ್ತವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಯುನೆಸ್ಕೊ ಪ್ರಮುಖ ಪಾತ್ರ ವಹಿಸಿದೆ.
ಸಾಹಿತ್ಯ ಕ್ಷೇತ್ರದ ಪ್ರಮುಖ ಪಾಲುದಾರರಾಗಿರುವ ಲೇಖಕ, ಪ್ರಕಾಶಕ, ಶಿಕ್ಷಕ, ಲೈಬ್ರರಿಯನ್, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು, ಮಾನವ ಹಕ್ಕು ಸ್ವಯಂ ಸೇವಾ ಸಂಸ್ಥೆಗಳು, ಸಮೂಹ ಮಾಧ್ಯಮ ಹೀಗೆ ಸಮಾನ ಮನಸ್ಕ ಎಲ್ಲರನ್ನೂ ಒಂದೇ ಜಾಗತಿಕ ವೇದಿಕೆಯಡಿ ತರಲು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಸಹಕಾರಿಯಾಗಿದೆ.
ಕೋವಿಡ್-19 ಸಮಯದಲ್ಲಿ ಡಿಜಿಟಲ್ ಲೈಬ್ರರಿಗಳ ಪಾತ್ರ