ಪ್ರತಿವರ್ಷ ಆಗಸ್ಟ್ 26 ರಂದು ವಿಶ್ವಾದ್ಯಂತ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸಲಾಗುತ್ತದೆ. ಲಿಂಗ ತಾರತಮ್ಯವಿಲ್ಲದೇ ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅಧಿಕಾರ ನೀಡುವ ಅಮೆರಿಕದ 19ನೇ ಕಾಯ್ದೆ ತಿದ್ದುಪಡಿಯ ದ್ಯೋತಕವಾಗಿ ಈ ದಿನಾಚರಣೆ ಆಚರಿಸಲಾಗುತ್ತದೆ.
ಮಹಿಳಾ ಸಮಾನತೆ ದಿನಾಚರಣೆಯ ಇತಿಹಾಸ
ಕಳೆದ ಹಲವಾರು ವರ್ಷಗಳಿಂದ ಮಹಿಳಾ ಸಮಾನತೆ ದಿನವನ್ನು ಆಚರಿಸಲಾಗುತ್ತಿದೆ. 1973 ರಲ್ಲಿ ಪ್ರಥಮ ಬಾರಿಗೆ ಮಹಿಳಾ ಸಮಾನತೆ ದಿನ ಆಚರಿಸಲಾಯಿತು. ಅಂದಿನಿಂದ ಅಮೆರಿಕದ ಅಧ್ಯಕ್ಷರು ನಿಗದಿಪಡಿಸಿರುವ ಆಗಸ್ಟ್ 26 ರಂದು ಈ ದಿನ ಆಚರಿಸಿಕೊಂಡು ಬರಲಾಗುತ್ತಿದೆ. 1920 ರಲ್ಲಿ ಇದೇ ದಿನದಂದು ಅಮೆರಿಕದಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡುವ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಅದರ ನೆನಪಿಗಾಗಿ ಅಂದೇ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸುವ ನಿರ್ಣಯ ಕೈಗೊಳ್ಳಲಾಯಿತು.
ನಾಗರಿಕ ಸಮಾಜ ಸಂಘಟನೆಗಳಿಂದ ಸತತವಾಗಿ 72 ವರ್ಷಗಳ ಕಾಲ ನಡೆದ ಹೋರಾಟದ ಫಲವಾಗಿ 1920ರಲ್ಲಿ ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತ್ತು. ಮಹಿಳೆಯರು ನೋಡಲು ಸುಂದರವಾಗಿರುತ್ತಾರಷ್ಟೇ.. ಆದರೆ ಅವರು ಯಾವುದೇ ಗಂಭೀರ ಕೆಲಸಗಳನ್ನು ಮಾಡಲಾರರು ಎಂಬ ಧೋರಣೆ ಇದಕ್ಕೂ ಮುನ್ನ ಅಮೆರಿಕದಲ್ಲಿ ಮನೆ ಮಾಡಿತ್ತು. ಕೊನೆಗೂ ಇಂಥದೊಂದು ತಾರತಮ್ಯವನ್ನು ಹೋಗಲಾಡಿಸಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕುಗಳು ಸಿಗಲಾರಂಭಿಸಿದವು.
ಭಾರತದಲ್ಲಿ ಮಹಿಳಾ ಸಮಾನತೆ
ಈ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಮಗು ತನ್ನ ಸಾಮರ್ಥ್ಯ ಹಾಗೂ ಪ್ರತಿಭೆಗಳಿಗೆ ತಕ್ಕಂತೆ ಮುಕ್ತವಾಗಿ ಜೀವನ ರೂಪಿಸಿಕೊಳ್ಳುವುದು ಆ ಮಗುವಿನ ಹಕ್ಕಾಗಿರುತ್ತದೆ. ಇದು ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಅನ್ವಯವಾಗುತ್ತದೆ. ಆದರೆ ಭಾರತದಲ್ಲಿ ಇಂದಿಗೂ ಲಿಂಗ ತಾರತಮ್ಯದ ಅನಿಷ್ಟ ಪದ್ಧತಿ ಮುಂದುವರೆದುಕೊಂಡು ಬಂದಿರುವುದು ವಿಷಾದನೀಯ.
ಗಂಡು ಹಾಗೂ ಹೆಣ್ಣು ಮಕ್ಕಳಿರುವ ಕೆಲ ಮನೆಗಳಲ್ಲಿ ಈಗಲೂ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳಾಗಿ ನೋಡಲಾಗುತ್ತದೆ. ಮನೆಗಳು ಮಾತ್ರವಲ್ಲದೆ ಹೊರಗಿನ ಸಮಾಜ, ಮಾಧ್ಯಮ, ಚಲನಚಿತ್ರ, ಪಠ್ಯ ಪುಸ್ತಕಗಳು ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯನ್ನು ಎರಡನೇ ದರ್ಜೆಯ ನಾಗರಿಕಳನ್ನಾಗಿ ನೋಡುತ್ತಿರುವುದು ಅಕ್ಷಮ್ಯ.
ಲಿಂಗ ಸಮಾನತೆಯ ಕೊರತೆಯಿಂದ ಸಹಜವಾಗಿಯೇ ಹೆಣ್ಣು ಮಕ್ಕಳು ಹಲವಾರು ಹಕ್ಕು ಹಾಗೂ ಸೌಲಭ್ಯಗಳಿಂದ ವಂಚಿತವಾಗುತ್ತಿದ್ದಾರೆ. ಗಂಡು ಮಕ್ಕಳಿಗೆ ನೀಡಲಾಗುವ ಸ್ವಾತಂತ್ರ್ಯ, ಸ್ವೇಚ್ಛೆ ಹೆಣ್ಣು ಮಕ್ಕಳಿಗೆ ಸಿಗುತ್ತಿಲ್ಲ. ಶಿಕ್ಷಣ, ಮದುವೆ, ನೌಕರಿ ಅಥವಾ ಸಾಮಾಜಿಕ ಸಂಬಂಧ ಹೀಗೆ ಯಾವುದೇ ವಿಷಯದಲ್ಲೂ ಹೆಣ್ಣು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವುದು ಅನೇಕ ಕುಟುಂಬಗಳಲ್ಲಿ ಇವತ್ತಿಗೂ ನಿರ್ಬಂಧಿತವಾಗಿದೆ. ಯಾವುದೇ ಕಚೇರಿ ಅಥವಾ ಕೆಲಸದ ಸ್ಥಳ ನೋಡಿದರೆ ಅಲ್ಲಿ ಕೇವಲ ಶೇ 25 ರಷ್ಟು ಮಾತ್ರ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದನ್ನು ಕಾಣಬಹುದು.
ಈ ಮಧ್ಯೆ ಹಲವಾರು ಭಾರತೀಯ ಹೆಣ್ಣು ಮಕ್ಕಳು ಇವತ್ತು ಜಗತ್ತಿನ ದೊಡ್ಡ ಕಂಪನಿಗಳ ಮುಖ್ಯಸ್ಥರಾಗಿ, ವಿಜ್ಞಾನಿಗಳಾಗಿ, ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿರುವುದು ಆಶಾಕಿರಣವಾಗಿದೆ.