ಕಾಬೂಲ್(ಅಫ್ಘಾನಿಸ್ತಾನ): ಕಾಶ್ಮೀರ ಸೇರಿದಂತೆ ಎಲ್ಲೆಲ್ಲಿಯೂ ಮುಸ್ಲಿಮರಿಗಾಗಿ ದನಿ ಎತ್ತುವ ಹಕ್ಕು ನಮಗಿದೆ ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ. ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸಲ್ಲ ಎಂದೂ ಸ್ಪಷ್ಟಪಡಿಸಿದೆ.
ಮುಸ್ಲಿಮರಿಗಾಗಿ ದನಿ ಎತ್ತುತ್ತೇವೆ
ಸುಹೇಲ್ ಶಾಹೀನ್ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ, ಮುಸ್ಲಿಮರಿರುವ ಕಾಶ್ಮೀರ ಹಾಗೂ ಜಗತ್ತಿನ ಇನ್ನಿತರ ಯಾವುದೇ ದೇಶಗಳ ಮುಸ್ಲಿಮರ ಪರವಾಗಿ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ಹೇಳಿದ್ದಾರೆ. ಮುಸ್ಲಿಮರ ಹಕ್ಕುಗಳಿಗಾಗಿ ನಾವು ಧ್ವನಿ ಎತ್ತುತ್ತೇವೆ. ಅವರು ನಿಮ್ಮ ಜನರು, ನಿಮ್ಮ ಕಾನೂನುಗಳ ಅಡಿ ಅವರಿಗೆ ಸಮಾನ ಹಕ್ಕುಗಳು ಸಿಗಬೇಕು ಎಂದು ಶಾಹೀನ್ ಹೇಳಿದರು.
ಯೂಟರ್ನ್ ಹೊಡೆದ ತಾಲಿಬಾನ್
ಇತ್ತೀಚೆಗಷ್ಟೇ ತಾಲಿಬಾನ್, ಕಾಶ್ಮೀರ ವಿವಾದವು ಇಂಡೋ-ಪಾಕ್ಗೆ ಸಂಬಂಧಿಸಿದ ವಿಚಾರ. ನಾವು ಮಧ್ಯ ಪ್ರವೇಶಿಸಲ್ಲ ಎಂದಿದ್ದರು. ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ತಮ್ಮ ಹೇಳಿಕೆಯನ್ನು ತಿರುಚಿದ್ದಾರೆ.
ತಾಲಿಬಾನ್ ಭೇಟಿಯಾದ ದೀಪಕ್ ಮಿತ್ತಲ್
ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗೆ ಬಳಸದಂತೆ ನೋಡಿಕೊಳ್ಳುವುದು ಭಾರತದ ಗುರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.
ಕಳೆದ ಮಂಗಳವಾರ, ಕತಾರ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ ಜಾಯ್ ಭೇಟಿಯಾಗಿದ್ದರು. ಈ ವೇಳೆ ಅಫ್ಘಾನಿಸ್ತಾನದ ಮಣ್ಣನ್ನು ಭಾರತೀಯ ವಿರೋಧಿ ಚಟುವಟಿಕೆಗಳಿಗೆ ಮತ್ತು ಭಯೋತ್ಪಾದನೆಗೆ ಬಳಸಬಾರದೆಂದು ಮನವಿ ಮಾಡಿದ್ದರು.