ಯಾಂಗೊನ್ (ಮಯನ್ಮಾರ್): ಮಯನ್ಮಾರ್ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿರುದ್ಧ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದು, ಪ್ರತಿಭಟನೆ ಇದೀಗ ವಿಕೋಪಕ್ಕೆ ತಿರುಗಿದೆ. ನಾಯ್ಪಿಟಾವ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಜಲಫಿರಂಗಿ ಪ್ರಯೋಗಿಸಿ ಚದುರಿಸಲು ಪೊಲೀಸರು ಮುಂದಾಗಿದ್ದರು.
ಮಿಲಿಟರಿ ಆಡಳಿತದ ವಿರುದ್ಧ ಜನ ದಂಗೆ ಎದ್ದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಥೈಲ್ಯಾಂಡ್ ಬಾರ್ಡರ್ನಲ್ಲಿ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪೊಲೀಸರ ಗುಂಡಿಗೆ ಮಹಿಳೆ ಬಲಿಯಾಗಿದ್ದಾಳೆ ಎಂದು ರಾಜಕೀಯ ಕೈದಿಗಳ ಸಂಘಟನೆ ಆರೋಪಿಸಿದೆ.
ಕಳೆದ ನವೆಂಬರ್ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ವೇಳೆ 75 ವರ್ಷದ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ನೇತೃತ್ವದ ಪಕ್ಷ ಜಯದಾಖಲಿಸಿತ್ತಾದರೂ, ಆಕೆಯೂ ಸೇರಿ ಇತರ ನಾಯಕರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. ಫೆ.1ರಿಂದ ಸುಮಾರು 195 ರಾಜಕೀಯ ನಾಯಕರ ಬಂಧನವಾಗಿದೆ ಎಂದು ಸಂಘಟನೆ ಆರೋಪಿಸಿದ್ದು, ಅದರಲ್ಲಿ ಕೇವಲ 13 ಮಂದಿ ಬಿಡುಗಡೆಯಾಗಿದ್ದಾರೆ ಎಂದಿದೆ.