ಬೀಜಿಂಗ್: ಕಳೆದ 24 ಗಂಟೆಗಳಲ್ಲಿ ಚೀನಾ ಮೊದಲ ಬಾರಿಗೆ ಯಾವುದೇ ಹೊಸ ಕೊರೊನಾ ಪ್ರಕರಣಗಳನ್ನು ದಾಖಲಿಸಿಲ್ಲ. ಕೇವಲ ಎರಡು ಅನುಮಾನಾಸ್ಪದ ಪ್ರಕರಣಗಳನ್ನು ಪತ್ತೆ ಮಾಡಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ಮಾಡಿದೆ.
ಕಳೆದ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಹುಟ್ಟಿಕೊಂಡ ನಂತರ ಲಕ್ಷಾಂತರ ಸಾವು - ನೋವಿಗೆ ಕಾರಣವಾಗಿತ್ತು. ಆದರೆ, ಮೇ 11 ರಿಂದ ಚೀನಾದಲ್ಲಿ ಹೊಸ ಪ್ರಕರಣಗಳು ನಿತ್ಯ 10 ಕ್ಕಿಂತಲೂ ಕಡಿಮೆ ಇವೆ. ಎರಡು ಶಂಕಿತ ಪ್ರಕರಣಗಳು ಶುಕ್ರವಾರ ಪತ್ತೆಯಾಗಿವೆ. ಒಂದು ಸ್ಥಳೀಯವಾಗಿ ಶಾಂಘೈ ನಗರದಲ್ಲಿ ಮತ್ತು ಇನ್ನೊಂದು ವಿದೇಶದಿಂದ ಈಶಾನ್ಯ ಪ್ರಾಂತ್ಯದ ಜಿಲಿನ್ನಲ್ಲಿ ಪತ್ತೆಯಾಗಿವೆ ಎಂದು ಆಯೋಗ ತಿಳಿಸಿದೆ.
ಹಿಂದಿನ ದಿನ, ನಾಲ್ಕು ಹೊಸ ಪ್ರಕರಣಗಳನ್ನು ದೃಢಪಡಿಸಲಾಗಿತ್ತು. ಕಳೆದ ಕೆಲವು ವಾರಗಳಲ್ಲಿ ರಷ್ಯಾದಿಂದ ಚೀನಾಕ್ಕೆ ಮರಳುತ್ತಿರುವವರಲ್ಲಿ 30 ಕ್ಕೂ ಹೆಚ್ಚು ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ, ಯಾವುದೇ ಹೊಸ ಸಾವು ಸಂಭವಿಸಿಲ್ಲ. ಮೂರು ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.
ಚೀನಾದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 79 ರಷ್ಟಿದೆ. ಅವುಗಳಲ್ಲಿ ಒಂಬತ್ತು ಜನರ ಸ್ಥಿತಿ ಗಂಭೀರವಾಗಿದೆ. ಹಾಂಕಾಂಗ್‌ನಲ್ಲಿ, ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶದಲ್ಲಿ ಪತ್ತೆಯಾದ ಒಟ್ಟು 1,065 ಪ್ರಕರಣಗಳಲ್ಲಿ 32 ಸಕ್ರಿಯ ಪ್ರಕರಣಗಳು ಉಳಿದಿವೆ. ಅವುಗಳಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದಾರ. ತೈವಾನ್‌ನಲ್ಲಿ 26 ಸಕ್ರಿಯ ಪ್ರಕರಣಗಳಿವೆ ಮತ್ತು ಏಳು ಸಾವುಗಳು ದಾಖಲಾಗಿವೆ ಎಂದು ಆಯೋಗ ಹೇಳಿದೆ.
ಮಾರ್ಚ್‌ನಿಂದ, ಚೀನಾ ಸ್ಥಳೀಯ ಮಟ್ಟದಲ್ಲಿ ವೈರಸ್‌ನ ಹೊಸ ಪ್ರಕರಣಗಳ ಹರಡುವಿಕೆಯಲ್ಲಿ ಗಣನೀಯ ಕುಸಿತವನ್ನು ದಾಖಲಿಸಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಕಠಿಣ ಕ್ರಮಗಳು ದೇಶದ ಅನೇಕ ಭಾಗಗಳಲ್ಲಿ ಕೋವಿಡ್-19 ನಿಯಂತ್ರಿಸಲು ಸಹಾಯ ಮಾಡಿದೆ.