ವಿಯೆಟ್ನಾಂ:ಭಾರತದಲ್ಲಿ 2ನೇ ಅಲೆ ಮೂಲಕ ಅವಾಂತರ ಸೃಷ್ಟಿಸಿರುವ ಕೊರೊನಾ ವೈರಸ್ನ ರೂಪಾಂತರಿ ಮಾದರಿ ಈಗ ಮತ್ತೊಂದು ಹಂತದ ಬದಲಾವಣೆಗೆ ಒಳಗಾಗಿ ವಿದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದೆ.
ಈ ಬಗ್ಗೆ ವಿಯೆಟ್ನಾಂನ ಆರೋಗ್ಯ ಸಚಿವ ಎನ್ಗುಯೆನ್ ಥನ್ಹ್ ಲಾಂಗ್ ಮಾಹಿತಿ ನೀಡಿದ್ದು, ದೇಶದಲ್ಲಿ ಹೊಸ ಮಾದರಿಯ ಕೊರೊನಾ ಪತ್ತೆಯಾಗಿದೆ. ಭಾರತ ಮತ್ತು ಬ್ರಿಟನ್ ದೇಶಗಳ ರೂಪಾಂತರದ ಸಮ್ಮಿಶ್ರಿತ ಮಾದರಿಯಾಗಿರುವ ಹೊಸ ತಳಿ ಹಿಂದಿನದ್ದಕ್ಕಿಂತಲೂ ಅಪಾಯಕಾರಿಯಾಗಿದ್ದು, ಅತ್ಯಂತ ವೇಗವಾಗಿ ಗಾಳಿಯಲ್ಲಿ ಹರಡುತ್ತಿದೆ ಎಂದು ತಿಳಿಸಿದ್ದಾರೆ.
ವಿಯೆಟ್ನಾಂ ಕಳೆದ ಬಾರಿ ಯಶಸ್ವಿಯಾಗಿ ಕೊರೊನಾ ನಿಯಂತ್ರಿಸಿತ್ತು. ಆದರೆ, ಈಗ ಕಾಣಿಸಿಕೊಂಡಿರುವ ರೂಪಾಂತರ ವೈರಸ್ನಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ದೇಶದಲ್ಲಿ ಕೊರೊನಾ ಏಕಾಏಕಿ ಸ್ಫೋಟಗೊಂಡಿದೆ. ಏಪ್ರಿಲ್ ಅಂತ್ಯದಿಂದ ಇಲ್ಲಿಯ ತನಕ ವಿಯೆಟ್ನಾಂನ 63 ನಗರಗಳ ಪೈಕಿ 30 ನಗರಗಳು ಹಾಗೂ ಇತರ ಪ್ರಾಂತ್ಯಗಳ ಸುಮಾರು 3,600 ಜನರು ಸೋಂಕಿಗೆ ತುತ್ತಾಗಿದ್ದಾರೆ. 47 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಏಪ್ರಿಲ್ ಅಂತ್ಯದಿಂದ ಇಲ್ಲಿಯ ತನಕ ಕಾಣಿಸಿಕೊಂಡಿರುವ ಹೊಸ ಪ್ರಕರಣಗಳು ವಿಯೆಟ್ನಾಂನಲ್ಲಿ ಈವರೆಗೆ ಪತ್ತೆಯಾಗಿರುವ ಸೋಂಕಿನ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದ್ದಾಗಿದ್ದು, ಇದು ಹೀಗೆಯೇ ಮುಂದುವರೆದಲ್ಲಿ ಅಪಾಯಕಾರಿ ಸ್ಥಿತಿಗೆ ದೇಶ ತಲುಪಲಿದೆ ಎಂದು ತಜ್ಞರು ಆತಂಕ ಪಟ್ಟಿದ್ದಾರೆ.
ಹೊಸ ಮಾದರಿಯ ಬಗ್ಗೆ ಪ್ರಯೋಗಾಲಯಗಳು ಪರೀಕ್ಷೆ ನಡೆಸಿದ್ದು, ಈ ವೈರಾಣು ಅತ್ಯಂತ ಕ್ಷಿಪ್ರವಾಗಿ ದ್ವಿಗುಣಗೊಳ್ಳುವ ಸಾಮರ್ಥ್ಯ ಹೊಂದಿರುವ ಕಾರಣದಿಂದಲೇ ಇಷ್ಟು ಪ್ರಕರಣಗಳು ಏಕಾಏಕಿ ಕಂಡು ಬರುತ್ತಿವೆ ಎಂದು ತಜ್ಞರು ಹೇಳಿದ್ದಾರೆ. ಇಲ್ಲಿಯವರೆಗೆ ವಿಯೆಟ್ನಾಂನಲ್ಲಿ ಒಟ್ಟು 6,396 ಪ್ರಕರಣಗಳು ದಾಖಲಾಗಿ ಒಟ್ಟು 47 ಸಾವು ಸಂಭವಿಸಿತ್ತು.
ಕೋವಿಡ್ ನಿಯಮಗಳನ್ನು ಸರಿಯಾಗಿ ಅನುಸರಿಸದ ಕಾರಣ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ದೇಶಾದ್ಯಂತ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ರೆಸ್ಟೋರೆಂಟ್, ಬಾರ್, ಕ್ಲಬ್ ಮತ್ತು ಸ್ಪಾಗಳನ್ನು ಅನಿರ್ದಿಷ್ಟಾವಧಿವರೆಗೆ ಮುಚ್ಚಲಾಗಿದೆ. ದೇಶದಲ್ಲಿ ಈವರೆಗೆ 1 ಮಿಲಿಯನ್ ಜನರಿಗೆ ಆಸ್ಟ್ರಾಜೆನಿಕಾ ಲಸಿಕೆ ನೀಡಲಾಗಿದ್ದು, ವ್ಯಾಕ್ಸಿನೇಷನ್ ಚುರುಕುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.