ವಾಶಿಂಗ್ಟನ್ :ಪದೇಪದೆ ಭಾರತದ ಗಡಿಯೊಳಗೆ ಅತಿಕ್ರಮಣ ಮಾಡುತ್ತಿರುವ ಚೀನಾದ ಪ್ರಯತ್ನಗಳನ್ನು ಹಿಮ್ಮೆಟ್ಟಿಸುವ ಭಾರತದ ಎಲ್ಲ ಕ್ರಮಗಳಿಗೆ ಬೆಂಬಲಿಸುವುದಾಗಿ ಅಮೆರಿಕೆಯ ಮಾಜಿ ಪ್ರಧಾನ ಉಪಸಹಾಯಕ ಕಾರ್ಯದರ್ಶಿ ಅಲೈಸ್ ಜಿ ವೆಲ್ಸ್ ಹೇಳಿದ್ದಾರೆ.
"ಬಾಹ್ಯ ಗಡಿಗಳ ರಕ್ಷಣೆ ಮಾಡಿಕೊಳ್ಳುವುದು ಅತಿ ಮುಖ್ಯವಾಗಿದೆ. ಭಾರತದ ಸಾರ್ವಭೌಮತ್ವದ ವಿರುದ್ಧ ಚೀನಾ ದುರಾಕ್ರಮಣವನ್ನು ತಡೆಯುವ ಭಾರತದ ಪ್ರಯತ್ನಗಳಿಗೆ ಅಮೆರಿಕದ ಬೆಂಬಲ ಯಾವಾಗಲೂ ಇರುತ್ತದೆ. #USindia Dosti #india," ಎಂದು ವೆಲ್ಸ್ ಟ್ವೀಟ್ ಮಾಡಿದ್ದಾರೆ.
ಲಡಾಖ್ ವಲಯ ಹಾಗೂ ಸಿಕ್ಕಿಂ ಪ್ರದೇಶದ ವಾಸ್ತವ ನಿಯಂತ್ರಣ ಗಡಿ ರೇಖೆಗುಂಟ ಚೀನಾ ಕಳೆದ ಮೇ ತಿಂಗಳ ಮೊದಲ ವಾರದಿಂದ ದೊಡ್ಡ ಪ್ರಮಾಣದ ಸೈನ್ಯ ಜಮಾವಣೆ ಮಾಡುತ್ತಿದೆ. ಸಿಕ್ಕಿಂನ ನಾಕು ಲಾ ಪ್ರದೇಶ ತಲುಪಿದ ಚೀನಿ ಸೈನಿಕರೊಂದಿಗೆ ಭಾರತೀಯ ಸೈನಿಕರು ಸಂಘರ್ಷವನ್ನೂ ನಡೆಸಿದ್ದರು. ಇದಾದ ನಂತರ ಮೇ 27 ರಂದು "ಚೀನಾ-ಭಾರತ ವಿವಾದ ಬಗೆಹರಿಸಲು ತಾವು ಬಯಸುವುದಾಗಿ ಹಾಗೂ ಸಿದ್ಧವಿರುವುದಾಗಿ" ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದಾಗ್ಯೂ ಪಶ್ಚಿಮ ಲಡಾಖ್ನಲ್ಲಿನ ತ್ವೇಷಮಯ ವಾತಾವರಣ ತಿಳಿಗೊಳಿಸಲು ಚೀನಾ ಮತ್ತು ಭಾರತ ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದವು. ಜೂನ್ 6 ರಂದು 14 ಕೋರ್ ಚೀಫ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಚೀನಾದ ಮೇಜರ್ ಜನರಲ್ ಲಿಯು ಲಿನ್ ಅವರ ಮಧ್ಯೆ ಚುಶುಲ್ ಬಳಿಯ ಮೊಲ್ಡೊದಲ್ಲಿ ಮಿಲಿಟರಿ ಮಟ್ಟದ ಮಾತುಕತೆಗಳು ನಡೆದಿದ್ದವು.
ಮೊದಲ ಹಂತದ ಮಾತುಕತೆಗಳ ನಂತರ ಚೀನಾ ಹಾಗೂ ಭಾರತದ ಸೇನಾ ಪಡೆಗಳು ಸಂಘರ್ಷ ನಿರ್ಮಾಣವಾಗಿದ್ದ ಗಾಲ್ವನ್ ನಾಲಾ ಪ್ರದೇಶದಿಂದ ಎರಡೂವರೆ ಕಿ.ಮೀ ಹಿಂದಕ್ಕೆ ಸರಿದಿದ್ದವು.