ವಾಷಿಂಗ್ಟನ್ (ಯುಎಸ್): ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ ಉಯಿಘುರ್ ಕಾರ್ಮಿಕರನ್ನು ಹೊಂದಿರುವ ಜವಳಿ ಮತ್ತು ಇತರ ಕೈಗಾರಿಕೆಗಳು ಉತ್ಪಾದಿಸುವ ವಸ್ತುಗಳಿಗೆ ಅಮೆರಿಕದ ಹಾಗೂ ವಿಶ್ವದ ಇನ್ನೂ ಹಲವಾರು ಅಂತಾರಾಷ್ಟ್ರೀಯ ಕಂಪನಿಗಳು ಬಹಿಷ್ಕಾರ ಹಾಕಿವೆ. ಈ ಬಹಿಷ್ಕಾರ ಕ್ರಮವನ್ನು ಪ್ರಶ್ನಿಸಿ ಚೀನಾ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ ಕ್ರಮವನ್ನು ಅಮೆರಿಕ ಖಂಡಿಸಿದೆ.
ಉಯಿಘುರ್ಗಳಿಗೆ ಸಂಬಂಧಿಸಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಮತ್ತು ಚೀನಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಸ್ವೀಡಿಷ್ ಬಹುರಾಷ್ಟ್ರೀಯ ಜವಳಿ ಕಂಪನಿ ಎಚ್ & ಎಂ, ಕ್ರೀಡಾ ಉಡುಪು ತಯಾರಿಸುವ ಪ್ರಖ್ಯಾತ ನೈಕ್ ಮತ್ತು ಅಡಿಡಾಸ್ ಕಂಪನಿಗಳ ವಸ್ತುಗಳಿಗೆ ಚೀನಾ ದೇಶದಲ್ಲಿ ಬಹಿಷ್ಕಾರ ಹಾಕಬೇಕೆಂದು ಚೀನಾ ಮಾಧ್ಯಮಗಳು ಕರೆ ನೀಡುತ್ತಿವೆ.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಬೈಡನ್ ಸರ್ಕಾರ, "ಯುಎಸ್ ಕಂಪನಿಗಳು ಕಾನೂನು ಮತ್ತು ಕಾರ್ಮಿಕರ ಕಾಳಜಿಗೆ ಬದ್ಧವಾಗಿರುತ್ತವೆ ಮತ್ತು ಬಲವಂತದ ದುಡಿಮೆಯನ್ನು ಯಾವುದೇ ರೀತಿಯಲ್ಲೂ ನಾವು ಬೆಂಬಲಿಸುವುದಿಲ್ಲ." ಎಂದು ಹೇಳಿದೆ.
"ಯುಎಸ್ ಕಾನೂನುಗಳಿಗೆ ಬದ್ಧವಾಗಿರುವ ಕಂಪನಿಗಳೊಂದಿಗೆ ಮಾತ್ರ ವ್ಯವಹರಿಸುತ್ತೇವೆ ಹಾಗೂ ನಾವು ಬಳಸುತ್ತಿರುವ ಉತ್ಪನ್ನಗಳನ್ನು ಬಲವಂತದ ದುಡಿಮೆಯಿಂದ ತಯಾರಿಸಲಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ." ಎಂದು ವಿದೇಶಾಂಗ ಇಲಾಖೆಯ ವಕ್ತಾರ ಜಲೀನಾ ಪೋರ್ಟರ್ ಹೇಳಿದ್ದಾರೆ.
ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್ ಯುರೋಪಿಯನ್ ಯೂನಿಯನ್ (ಇಯು) ಜೊತೆ ಸೇರಿಕೊಂಡು ಚೀನಾ ವಿರುದ್ಧ "ಸಂಘಟಿತ ಕ್ರಮ"ವನ್ನು ಹೆಣೆದಿದೆ. ಈ ಮೂಲಕ ಕ್ಸಿನ್‌ಜಿಯಾಂಗ್‌ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದುರುಪಯೋಗದ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಲು ಯುಎಸ್ ಮುಂದಾಗಿದೆ.